ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ `ಸೀಬರ್ಡ್’ ಹೆಸರಿನ ಖಾಸಗಿ ಬಸ್ ಉಪ್ಪಿನಂಗಡಿ ಸಮೀಪದ ಗೋಳಿತೊಟ್ಟು ಸಮೀಪ ಆಕಸ್ಮಿಕ ಬೆಂಕಿಗೆ ತುತ್ತಾಗಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಸೋಮವಾರ ನಸುಕಿನ ಜಾವ ಸಂಭವಿಸಿದೆ. ಘಟನೆಯಲ್ಲಿ ಮಹಿಳೆ ಹಾಗೂ ಇನ್ನೋರ್ವ ಪ್ರಯಾಣಿಕನಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಸೀಬರ್ಡ್ ಬಸ್ ಗೋಳಿತೊಟ್ಟು ಸಮೀಪ ಬರುತ್ತಲೇ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಬಸ್ಸಿನಲ್ಲಿ 25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರಿದ್ದರು. ಅವರು ಬೆಂಕಿ ಕಾಣಿಸಿಕೊಂಡ ಕೂಡಲೇ ಇಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ಕೆಲವೇ ನಿಮಿಷಗಳಲ್ಲಿ ರಸ್ತೆ ಮಧ್ಯೆಯೇ ಬೆಂಕಿಗೆ ಆಹುತಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಉಪ್ಪಿನಂಗಡಿ ಠಾಣಾ ಪೊಲೀಸರು, ಅಗ್ನಿಶಾಮಕದಳ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಲು ಯತ್ನಿಸಿದರೂ ಅಷ್ಟರಲ್ಲಿ ಬಸ್ ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿತ್ತು. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






