ಮೂಡುಬಿದರೆ: ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನೂತನ 87ನೇ ಶಾಖೆ ಶಿರ್ತಾಡಿಯ ಸೂರ್ಯ ಕಾಂಪ್ಲೆಕ್ಸ್ನಲ್ಲಿ ಸೋಮವಾರ ಉದ್ಘಾಟನೆಗೊಂಡಿತು.
ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ 87ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರು ಮತ್ತು ಕೃಷಿಕರಿಗಾಗಿ ಸಹಕಾರಿ ಬ್ಯಾಂಕ್ಗಳು ಬೇಕು. ಸಾಮಾನ್ಯ ಜನರ ಮತ್ತು ಕೃಷಿಕರ ಕುಂದು ಕೊರತೆಗಳನ್ನು ನೀಗಿಸಿ ಅವರ ಅಭಿವೃದ್ಧಿಗಾಗಿ ಮುಕ್ತವಾಗಿ ಸ್ಪಂದಿಸಲು ಸಹಕಾರಿ ಬ್ಯಾಂಕ್ಗಳ ಅಗತ್ಯವಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಹಕಾರಿ ಬ್ಯಾಂಕ್ಗಳು ಉತ್ತಮ ಸಾಧನೆಯನ್ನು ಮಾಡುತ್ತಿವೆ ಈ ನಿಟ್ಟಿನಲ್ಲಿ ಶಿರ್ತಾಡಿ ಪ್ರದೇಶದಲ್ಲಿ ಆರಂಭಗೊಂಡಿರುವ ಸಹಕಾರಿ ಬ್ಯಾಂಕ್ ಕೂಡಾ ಉತ್ತಮ ಕೆಲಸವನ್ನು ಮಾಡಬೇಕಾಗಿದೆ ಎಂದು ಶುಭ ಹಾರೈಸಿದರು.
ಶಿರ್ತಾಡಿಯಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ನ ನೂತನ 87ನೇ ಶಾಖೆ ಉಧ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮೀನುಗಾರಿಕಾ ಸಚಿವ ಅಭಯಚಂದ್ರ ಜ್ಯೆನ್ 
ರಾಜ್ಯ ಅಪೆಕ್ಸ್ ಬ್ಯಾಂಕ್ನ ನಿರ್ದೇಶಕ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಸಹಕಾರಿ ಬ್ಯಾಂಕ್ಗಳು ಬಡವರಿಗೆ ಮತ್ತು ಕೃಷಿಕರಿಗೆ ಸಹಾಯ ಮಾಡುವ ಬ್ಯಾಂಕ್. ಸಹಕಾರಿ ಕ್ಷೇತ್ರವು ಆರಂಭವಾಗಿ 2015ಕ್ಕೆ 100ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ಈ ಸಂದರ್ಭದಲ್ಲಿ ಸಹಕಾರಿ ಬ್ಯಾಂಕ್ ಅವಿಭಜಿತ ಜಿಲ್ಲೆಯಲ್ಲಿ 101ನೇ ಶಾಖೆಯನ್ನು ತೆರೆಯುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಶಿರ್ತಾಡಿಯಲ್ಲಿ ಇಂದು ಆರಂಭಗೊಂಡಿರುವ ಶಾಖೆಯಲ್ಲಿ ಈಗಾಗಲೇ 10ಕೋಟಿಯನ್ನು ಠೇವಣಿ ಇಡಲಾಗಿದೆ, 1600 ಖಾತೆಗಳನ್ನು ಹೊಂದಿದ್ದು 13 ಜನರಿಗೆ ರೂ ಒಂದು ಕೋಟಿ ಸಾಲವನ್ನು ನೀಡುತ್ತಿದೆ ಇದು ಅಭಿವೃದ್ಧಿಯ ಸಂಕೇತ. ಕೃಷಿಕರಿಗೆ 3ಲಕ್ಷದಷ್ಟು ಸಾಲವನ್ನು ನೀಡುತ್ತಿದ್ದು 1 ತಿಂಗಳವರೆಗೆ ಬಡ್ಡಿ ರಹಿತವಾಗಿರುತ್ತದೆ ಎಂದು ಹೇಳಿದರು.
ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ ಬ್ಯಾಂಕ್ನ ಗಣಕೀರಣದ, ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ ಭದ್ರತಾ ಕೋಶವನ್ನು ಉದ್ಘಾಟಿಸಿದರು.
ಶಿರ್ತಾಡಿ ಮೌಂಟ್ ಕಾರ್ಮಲ್ ಮಾತಾ ದೇವಾಲಯದ ಧರ್ಮಗುರು ಫಾ. ಫ್ರಾನ್ಸಿಸ್ ಕ್ರಾಸ್ತಾ, ಪೆರಾಡಿ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಸತೀಶ ಕೆ.ಕಾಶಿಪಟ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಬಾಗಲಕೋಟೆ ಕೃಷಿ ವಿವಿಯ ನಿರ್ದೇಶಕ ಸಂಪತ್ ಸಾಮ್ಯಾಜ್ಯ, ಜಿಲ್ಲಾ ಬ್ಯಾಂಕ್ನ ನಿರ್ದೇಶಕ ಎಂ.ವಾದಿರಾಜ ಶೆಟ್ಟಿ, ಶಿರ್ತಾಡಿ ತಾ.ಪಂ ಸದಸ್ಯ ರುಕ್ಕಯ್ಯ ಪೂಜಾರಿ, ನೆಲ್ಲಿಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಯುವರಾಜ ಹೆಗ್ಡೆ, ಶಿರ್ತಾಡಿ ಗ್ರಾ.ಪಂನ ಅಧ್ಯಕ್ಷ ಲಕ್ಷ್ಮಣ್ ಸುವರ್ಣ, ಸೂರ್ಯ ಕಾಂಪ್ಲೆಕ್ಸ್ನ ಮಾಲಕಿ ಲೂಸಿ ರೊನಾಲ್ಡ್ ಲೋಬೋ ಉಪಸ್ಥಿತರಿದ್ದರು.
ಸನ್ಮಾನ: ಸ್ಥಳೀಯ ಸಹಕಾರಿಗಳ ಪರವಾಗಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಅವರನ್ನು, ಶಿರ್ತಾಡಿಯಲ್ಲಿ ಶಾಖೆ ಮಾಡಲು ಸಹಕರಿಸಿರುವ ಶಾಖಾ ವ್ಯವಸ್ಥಾಪಕಿ ಸುಜಯ, ಸತೀಶ.ಕೆ.ಕಾಶಿಪಟ್ಣ ಮತ್ತು ಲೂಸಿ ರೊನಾಲ್ಡ್ ಲೋಬೋ ಅವರನ್ನು ಸನ್ಮಾನಿಸಲಾಯಿತು.
ನಿರ್ಧೇಶಕ ಭಾಸ್ಕರ್ ಶೆಟ್ಟಿ ಸ್ವಾಗತಿಸಿದರು. ಮೊದಲ ಖಾತೆದಾರರಾದ ಹರಿಣಿ ಶಿರ್ತಾಡಿ ಪಾಸು ಪುಸ್ತಕ, ಠೇವಣಿದಾರರಾದ ರತ್ನಾಕರ ಹೆಗ್ಡೆ ಅವರಿಗೆ ಆದೇಶಪತ್ರ, ಉದಯ ಜೈನ್ ಅವರಿಗೆ ಮೊದಲ ಸಾಲ ಪತ್ರ ಮತ್ತು ಪ್ರಥಮ ಲಾಕರ್ ಗ್ರಾಹಕಿ ಗೀತಾ.ಪಿ.ಶೆಟ್ಟಿ ಅವರಿಗೆ ಕೀಯನ್ನು ಹಸ್ತಾಂತರಿಸಲಯಿತು. ನಿತ್ಯಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ವ್ಯವಸ್ಥಾಪನಾ ನಿರ್ದೇಶಕ ಎಂ.ಗೋಪಾಲಕೃಷ್ಣ ಭಟ್ ವಂದಿಸಿದರು.
