ಕೈಕಂಬ : ಯೋಗದಲ್ಲಿ ಏಕಾಗ್ರತೆ ಇದ್ದು, ಇದರಲ್ಲಿ ಆಸಕ್ತಿ ಬೆಳೆಸಿಕೊಂಡಲ್ಲಿ ಮಕ್ಕಳಲ್ಲಿರುವ ನಕಾರಾತ್ಮಕ ಚಿಂತನೆಗಳು ದೂರವಾಗಿ, ಕಲಿಕೆಯ ಮೇಲೆ ಧನಾತ್ಮಕ ಪರಿಣಾಮ ಬೀರಲಿದೆ ಎಂದು ಎಸ್‌ಪಿವೈಎಸ್ಸೆಸ್ ಯೋಗಗುರು ಉಮೇಶ್ ಪೂಜಾರ ಅವರು ಹೇಳಿದರು.
ಗುರುಪುರ ಕೈಕಂಬದ(ಕಿನ್ನಿಕಂಬಳ) ರೋಸಾ ಮಿಸ್ತಿಕ ಪ್ರೌಢಶಾಲೆಯಲ್ಲಿ ‘ವಿಶ್ವ ಯೋಗ ದಿನ’ದ ಪ್ರಯುಕ್ತ ಸೋಮವಾರ ಶಾಲಾ ಮಕ್ಕಳಿಗಾಗಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ(ಎಸ್‌ಪಿವೈಎಸ್ಸೆಸ್) ಆಯೋಜಿಸಿದ ಯೋಗ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕಿ ಸಿಸ್ಟರ್ ಗ್ರೇಸ್ ಮೋನಿಕಾ ಮಾತನಾಡಿ, ಕೋಟಿಗಟ್ಟಲೆ ಆಸ್ತಿ ಇದ್ದರೂ ಆರೋಗ್ಯ ಇಲ್ಲದಿದ್ದರೆ ಜೀವನ ವ್ಯರ್ಥ. ಶ್ರೀಮಂತರಿರಲಿ, ಬಡವರಿರಲಿ ಆರೋಗ್ಯ ಮುಖ್ಯ. ಆದ್ದರಿಂದ ಪತಂಜಲಿ ಮುನಿಯವರು ಶತಮಾನಗಳ ಹಿಂದೆ ಹಾಕಿಕೊಟ್ಟಿರುವ ಯೋಗ ಮಾರ್ಗದಲ್ಲಿ ನಡೆದು ಆರೋಗ್ಯಕರ ಜೀವನಕ್ಕೆ ಆದ್ಯತೆ ನೀಡಬೇಕು. ಶಾಲಾ ಮಕ್ಕಳು ಯೋಗ ರೂಢಿಸಿಕೊಳ್ಳಬೇಕು ಎಂದರು.
ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಡಾ. ಲೊಲಿಟಾ ಪಿರೇರಾ ಮಾತನಾಡಿ, ಒಂದು ದಿನಕ್ಕೆ ಯೋಗವಲ್ಲ, ಅದು ಯೋಗ ಜೀವನಶೈಲಿಯಾಗಬೇಕು ಎಂದರು.
ಎಸ್‌ಪಿವೈಎಸ್ಸೆಸ್‌ನ ಯೋಗ ಸಂಚಾಲಕಿ ಸುಜಾತಾ ಎಸ್, ಯೋಗ ಶಿಕ್ಷಕ ಪದ್ಮನಾಭ ಉಪಸ್ಥಿತರಿದ್ದರು. ಶಾಲಾ ದೈಹಿಕ ಶಿಕ್ಷಕ ಲ್ಯಾನ್ಸಿ ಸಿಕ್ವೇರ ಸ್ವಾಗತಿಸಿದರು. ಶಿಕ್ಷಕ ಪ್ರವೀಣ್ ಕುಟಿನ್ಹೋ ಕಾರ್ಯಕ್ರಮ ನಿರೂಪಿಸಿದರು.
