ಬಂಟ್ವಾಳ: ಉತ್ತರಕನ್ನಡ ಜಿಲ್ಲೆ ಸೇರಿದಂತೆ ಭಟ್ಕಳ, ಕಾರವಾರ ಮತ್ತಿತರ ಕರಾವಳಿ ಪ್ರದೇಶಗಳಲ್ಲಿ ಪ್ರವರ್ಗ ೧ರ ಮೀನುಗಾರ ಮೊಗೇರ ಜಾತಿಯ ಅಪಾರ ಮಂದಿ ಪರಿಶಿಷ್ಟ ಜಾತಿ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಸರ್ಕಾರಿ ಸೌಲಭ್ಯ ದುರುಪಯೋಗ ಪಡಿಸುವುದರ ಜೊತೆಗೆ ನೈಜ ಪರಿಶಿಷ್ಟರ ಸಾಂವಿಧಾನಿಕ ಹಕ್ಕು ಕಸಿದುಕೊಳ್ಳುತ್ತಿರುವ ಬಗ್ಗೆ ಮೊಗೇರ ಸಂಘ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಸಂಘದ ನಿಕಟಪೂರ್ವ ರಾಜ್ಯಾಧ್ಯಕ್ಷ ಸುಂದರ ಮೇರ ಎಚ್ಚರಿಸಿದ್ದಾರೆ.
ಬಿ.ಸಿ.ರೋಡಿನಲ್ಲಿ ಸೋಮವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶತಮಾನಗಳಿಂದ ಅಸ್ಪೃಶ್ಯತೆ ಮತ್ತು ಅಸಮಾನತೆಯಿಂದ ಬೆಂದು ಹೋಗಿರುವ ಅವಿಭಜಿತ ಜಿಲ್ಲೆಯ ಮೂಲ ನಿವಾಸಿಗಳಿಗೆ ಸಂವಿಧಾನ ರೂಪಿಸಿದ ಮೀಸಲಾತಿ ಹಕ್ಕು ಕಸಿಯಲಾಗಿದೆ. ಕಳೆದ ೧೯೭೭ರ ಬಳಿಕ ಮೀಸಲಾತಿಗೆ ಸರ್ಕಾರವು ಪ್ರಾದೇಶಿಕ ನಿರ್ಬಂಧ ತೆರವುಗೊಳಿಸಿದ ಪರಿಣಾಮ ಸಾಮಾಜಿಕ ಮತ್ತು ಆರ್ಥಿಕವಾಗಿ ಬಲಾಢ್ಯರಾಗಿರುವ ಅಲ್ಲಿನ ಮೀನುಗಾರರು (ಬೆಸ್ತರು) ಮೊಗೇರ ಎಂಬ ಸಮಾನಾಂತರ ಪದ ಬಳಸಿ ಮೀಸಲಾತಿ ದುರ್ಬಳಕೆ ಮಾಡುತ್ತಿದೆ.
ಈಗಾಗಲೇ ಸುಮಾರು ೧೦ ಸಾವಿರ ಮಂದಿ ಸುಳ್ಳು ದಾಖಲೆ ಸೃಷ್ಟಿಸಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಈ ಬಗ್ಗೆ ಈಗಾಗಲೇ ನಮ್ಮ ಸಮುದಾಯದ ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ಮೂಲಕ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೂ ಮನವಿ ಸಲ್ಲಿಸಲಾಗಿದೆ ಎಂದರು.
೧೦ರಂದು ತಹಶೀಲ್ದಾರ್ ಕಚೇರಿ ಎದುರು ಧರಣಿ:
ಇದೇ ೧೦ರಂದು ಬಂಟ್ವಾಳ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದ್ದು, ಸುಳ್ಳು ದಾಖಲೆ ಸೃಷ್ಟಿಸುತ್ತಿರುವ ಮೀನುಗಾರ ಮೊಗೇರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗುವುದು. ರಾಜ್ಯದೆಲ್ಲೆಡೆ ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿರುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಸೇಸಪ್ಪ ಬೆದ್ರಕಾಡು, ವೆಂಕಟೇಶ, ಸರೋಜಿನಿ, ಚಂದ್ರಶೇಖರ್, ಸುರೇಶ್ ಕುಮಾರ್, ಸಂಜೀವ ಮತ್ತಿತರರು ಇದ್ದರು.
