ಬಂಟ್ವಾಳ:ರಾಜ್ಯ ಸರ್ಕಾರದ ನಿರ್ದೇಶನದಂತೆ ಪ್ರತೀ ತಾಲ್ಲೂಕು ಕೇಂದ್ರಗಳಲ್ಲಿ ನಡೆಯುವ ‘ಜನತಾ ದರ್ಶನ’ ಕಾರ್ಯಕ್ರಮವು ಬಿ.ಸಿ.ರೋಡ್ನಲ್ಲಿ ಇದೇ 19ರಂದು ನಡೆಯಲಿದೆ ಎಂದು ಸಹಾಯಕ ಆಯುಕ್ತ ಡಾ.ಅಶೋಕ್ ಹೇಳಿದ್ದಾರೆ.
ಬಿ.ಸಿ.ರೋಡ್ ತಾಲ್ಲೂಕು ಕಚೇರಿಯಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಬುಧವಾರ ನಡೆದ ಅಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಈಗಾಗಲೇ ತಾಲ್ಲೂಕು ಕಚೇರಿಯಲ್ಲಿ ನಾಗರಿಕರಿಗೆ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ದೂರು, ಅಹವಾಲು ಮತ್ತು ಸವಲತ್ತಿನ ಅರ್ಜಿ ನೀಡುವುದಕ್ಕಾಗಿ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು, ಪ್ರತೀ ಗ್ರಾಮ ಪಂಚಾಯಿತಿನಲ್ಲಿ ಆಯಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಅರ್ಜಿ ಸ್ವೀಕರಿಸಲು ಸೂಚಿಸಲಾಗಿದೆ. ಈ ಎಲ್ಲಾ ಅರ್ಜಿಗಳು ತ್ವರಿತವಾಗಿ ವಿಲೇವಾರಿಗೊಂಡು ನ.19ರಂದು ನಡೆಯುವ ಜನತಾದರ್ಶನ ಕಾರ್ಯಕ್ರಮದಲ್ಲಿ ಸೂಕ್ತ ಆದೇಶ ಮತ್ತು ದೃಢಪತ್ರ ವಿತರಣೆಯಾಗುತ್ತದೆ ಎಂದು ಅವರು ವಿವರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ಈಗಾಗಲೇ ಬೆಳ್ತಂಗಡಿ ತಾಲ್ಲೂಕಿನಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮ ಯಶಸ್ವಿಯಾಗಿದ್ದು, ಬಿ.ಸಿ.ರೋಡ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿಯೂ ಸುಮಾರು ಎರಡು ಸಾವಿರಕ್ಕೂ ಮಿಕ್ಕಿ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯಾನ್ ಮಿರಾಂದ, ಉಪತಹಶೀಲ್ದಾರ್ ರೋಹಿನಾಥ್, ವಾಮನ, ಕಂದಾಯ ನಿರೀಕ್ಷಕರಾದ ನಾರಾಯಣ ಪೂಜಾರಿ, ದಿವಾಕರ ಪಡ್ಜಾಲ್, ಸಾಧು, ಪುರಸಭೆ ಅಧಿಕಾರಿ ಮತ್ತಡಿ, ತೋಟಗಾರಿಕೆ ಸಹಾಯಕ ನಿರ್ದೇಶಕ ಸಂಜೀವ ನಾಯ್ಕ, ಕೃಷಿ ಅಧಿಕಾರಿ ಪಿ.ಎಫ್.ಮಿರಾಂದ, ಸಮಾಜ ಕಲ್ಯಾಣಾಧಿಕಾರಿ ರೆಡ್ಡಿ ನಾಯಕ್, ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಕುಮಾರ್ ಮತ್ತಿತರರು ಇದ್ದರು.
