ಕೈಕಂಬ : ಗುರುಪುರ ಗ್ರಾಮ ಪಂಚಾಯತ್ನಲ್ಲಿ ‘ಪಂಚಾಯತ್ ರಾಜ್’ ದಿನದ ಪ್ರಯುಕ್ತ ಎ. ೨೪ರಂದು ಭಾನುವಾರ ಪಂಚಾಯತ್ ಅಧ್ಯಕ್ಷ ಯಶವಂತ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಗ್ರಾಮದ ಐವರು ಸಾಧಕರನ್ನು ಸನ್ಮಾನಿಸಲಾಯಿತು.
ಅಡ್ಡೂರು-ಪೊಳಲಿ ಭಾಗದಲ್ಲಿ ಸೇತುವೆ ಇಲ್ಲದ ಕಾಲದಲ್ಲಿ ಪರಿಸರವಾಸಿಗಳಿಗೆ ಫಲ್ಗುಣಿ ನದಿಯಲ್ಲಿ ದೋಣಿ ಸೇವೆ ನೀಡಿದ್ದ ವಯೋವೃದ್ಧ ಅಬ್ದುಲ್ ಕರೀಂ, ಕರೋನಾ ಸಂದರ್ಭದಲ್ಲಿ ಅಡ್ಡೂರು ಮತ್ತು ಗುರುಪುರ ಗ್ರಾಮವಾಸಿಗಳಿಗೆ ಆಶಾಕಿರಣವಾಗಿದ್ದ ಅಡ್ಡೂರಿನ ಡಾ. ಸಿದ್ಧಿಕಿ ಮತ್ತು ಗುರುಪುರದ ಡಾ. ಶ್ವೇತಾ ಪ್ರಭು, ಗುರುಪುರದ ಕಂಬಳ ಕೋಣಗಳ ಯಜಮಾನ ಜಗದೀಶ್ ಶೆಟ್ಟಿ ಕಾರಮೊಗರುಗುತ್ತು ಹಾಗೂ ಗುರುಪುರದ ಮ್ಯಾರಥಾನ್ ಓಟಗಾರ ರಕ್ಷಿತ್ ಜೆ ಶೆಟ್ಟಿ ಅವರಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಅಧ್ಯಕ್ಷ ಯಶವಂತ ಶೆಟ್ಟಿ ಮಾತನಾಡಿ, ಸರ್ಕಾರದ ಮಾರ್ಗಸೂಚಿಯಂತೆ ಗ್ರಾಮದ ಹಿರಿಯ ಸಾಧಕರನ್ನು ಗುರುತಿಸಲಾಗಿದ್ದು, ಇವರ ಸೇವೆ ಅನನ್ಯವಾಗಿತ್ತು. ಗ್ರಾಮವಾಸಿಗಳ ಕಷ್ಟಕ್ಕೆ ಹತ್ತಿರದಿಂದ ಸ್ಪಂದಿಸಿದ ಇವರು ನೈಜ ಸಮಾಜಸೇವಕರು ಎಂದರು.
ಪಂಚಾಯತ್ ಪಿಡಿಒ ಅಬೂಬಕ್ಕರ್ ಸ್ವಾಗತಿಸಿ, ಇಂದಿನಿಂದ ಮುಂದಿನ ಏಳು ದಿನದವರೆಗೆ ಪಂಚಾಯತ್ನಲ್ಲಿ ಗ್ರಾಮದ ಅರ್ಹ ಕೃಷಿಕರು ‘ಕಿಸಾನ್ ಕ್ರೆಡಿಟ್ ಕಾರ್ಡ್’ ಲಭ್ಯವಿದೆ ಎನ್ನುವ ಮಾಹಿತಿ ನೀಡುತ್ತ, ಕೃಷಿಕರು ಈ ಕಾರ್ಡ್ ಮಾಡಿಕೊಳ್ಳಲು ಪಂಚಾಯತ್ ಕಚೇರಿಗೆ ಆರ್ಟಿಸಿ, ಆಧಾರ್ ಕಾರ್ಡ್ ಕಂದಾಯ ಪಾವತಿ ರಶೀದಿ, ಬ್ಯಾಂಕ್ ಖಾತೆಯ ಪ್ರತಿ ಹಾಗೂ ಭಾವಚಿತ್ರ ಒದಗಿಸಬೇಕು ಎಂದರು.
ಸಭೆಯಲ್ಲಿ ಪಂಚಾಯತ್ ಕಾರ್ಯದರ್ಶಿ ಅಶೋಕ್, ಸದಸ್ಯರಾದ ರಾಜೇಶ್ ಸುವರ್ಣ, ನಳಿನಿ ಶೆಟ್ಟಿ, ಸಂಪಾ, ಬಾಲಕೃಷ್ಣ ಪೂಜಾರಿ, ಮನ್ಸೂರ್, ಅಶ್ರಫ್, ಬಬಿತಾ, ಪಂಚಾಯತ್ ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
