ಬಂಟ್ವಾಳ: ತಾಲ್ಲೂಕಿನ ನಾವೂರು ಕೂಡಿಬೈಲು ಗದ್ದೆಯಲ್ಲಿ ಕಡಿಮೆ ಅವಧಿಯಲ್ಲಿ ಸುಸಜ್ಜಿತ ಹೊಸ ಕರೆ ಸಿದ್ಧಪಡಿಸಿ ಕಂಬಳ ಸಮಿತಿ ಅಧ್ಯಕ್ಷ ಪಿಯೂಸ್ ಎಲ್.ರಾಡ್ರಿಗಸ್ ಅಧ್ಯಕ್ಷತೆಯಲ್ಲಿ ನಡೆದ ೧೧ನೇ ವರ್ಷದ ‘ಮೂಡೂರು-ಪಡೂರು’ ಬಂಟ್ವಾಳ ಕಂಬಳ ಹಲವು ಅಡ್ಡಿ ಆತಂಕಗಳ ನಡುವೆಯೂ ವರುಣ ದೇವರ ಕೃಪೆಯಿಂದ ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಸಮಿತಿ ಗೌರವಾಧ್ಯಕ್ಷ , ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಇಲ್ಲಿನ ನಾವೂರು ಕೂಡಿಬೈಲು ಗದ್ದೆಯಲ್ಲಿ ಸೋಮವಾರ ಸಮಾರೋಪಗೊಂಡ ೧೧ನೇ ವರ್ಷದ ‘ಮೂಡೂರು-ಪಡೂರು’ ಬಂಟ್ವಾಳ ಕಂಬಳ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಂಬಳ ಕರೆಗೆ ನೇತ್ರಾವತಿ ನದಿಯಿಂದ ಮರಳು ತಂದು ಹಾಕುವುದಕ್ಕೂ ರಾಜಕೀಯ ವಿರೋಧಿಗಳು ಅಡ್ಡಿಪಡಿಸಿದ್ದಾರೆ. ಪೊಲೀಸರು ಮತ್ತು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಕಂಬಳಕ್ಕೆ ಅಡ್ಡಿಪಡಿಸಲು ಯತ್ನಿಸಿದ್ದಾರೆ. ಆದರೆ ಹಲವು ಅಡ್ಡಿ ಆತಂಕಗಳ ನಡುವೆಯೂ ನಮ್ಮ ಕಂಬಳ ಮತ್ತು ನಿಮ್ಮ ಕಂಬಳಕ್ಕೆ ಅಂತಿಮವಾಗಿ ಯಶಸ್ಸು ಸಿಕ್ಕಿದೆ. ಸ್ಥಳೀಯ ಕಂಬಳಾಸಕ್ತರು ಮತ್ತು ಕೃಷಿಕರು ಜಾತಿ, ಧರ್ಮಗಳನ್ನು ಮೀರಿ ಸೌಹಾರ್ದಯುತವಾಗಿ ಸ್ಪಂದಿಸಿದ್ದಾರೆ. ದೇವರಿಗೂ ನಮ್ಮ ಪ್ರಾಮಾಣಿಕ ಪ್ರಾರ್ಥನೆ ಕೇಳಿಸಿದಂತೆ ವರುಣ ದೇವರ ಕೃಪೆಯೂ ಸಿಕ್ಕಿದೆ. ಈ ಕಂಬಳದಲ್ಲಿ ನನ್ನ ಹೆಸರಿನಲ್ಲಿ ಓಟದ ಕೋಣಗಳನ್ನು ಓಡಿಸಿ ಸಂಭ್ರಮಿಸುವುದು ತಪ್ಪು. ಆದರೆ ನನ್ನ ಸ್ನೇಹಿತರ ಒತ್ತಾಯಕ್ಕೆ ಮಣಿದು ಒಪ್ಪಿಗೆ ನೀಡಿದೆ ಎಂದು ಅವರು ವಿವರಿಸಿದರು.
ಸಮಿತಿ ಸಂಚಾಲಕ ಬಿ.ಪದ್ಮಶೇಖರ್ ಜೈನ್, ಕಾರ್ಯಾಧ್ಯಕ್ಷ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಪಾಧ್ಯಕ್ಷರಾದ ಅವಿಲ್ ಮಿನೇಜಸ್, ಬೇಬಿ ಕುಂದರ್, ಸುದೀಪ್ ಕುಮಾರ್ ಶೆಟ್ಟಿ, ಸುದರ್ಶನ ಜೈನ್, ಕೆ. ಮಾಯಿಲಪ್ಪ ಸಾಲ್ಯಾನ್, ಕೋಶಾಧಿಕಾರಿ ಫಿಲಿಪ್ ಫ್ರಾಂಕ್, ನಾವೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ ಕುಲಾಲ್, ರಾಜೇಶ್ ರಾಡ್ರಿಗಸ್, ಶಬೀರ್ ಸಿದ್ಧಕಟ್ಟೆ, ಡೆನ್ಜಿಲ್ ನೊರೋನ್ಹ ಮತ್ತಿತರರು ಇದ್ದರು.
