ಮೂಡುಬಿದರೆ: ಚಲಿಸುತ್ತಿದ್ದ ರಿಕ್ಷಾದಿಂದ ರಸ್ತೆಗೆಸೆಯಲ್ಪಟ್ಟ ಯುವತಿ ಗಂಭೀರ ಗಾಯಗೊಂಡ ಘಟನೆ ತೋಡಾರಿನಲ್ಲಿ ಭಾನುವಾರ ರಾತ್ರಿ ಸಂಭವಿಸಿದೆ.
ಗಾಯಗೊಂಡ ಯುವತಿಯನ್ನು ಬಂಟ್ವಾಳ ಮಾಣಿಯ ರಜನಿ(22)ಎಂದು ಗುರುತಿಸಲಾಗಿದೆ.
ಈಕೆ ಹಾಗೂ ಸಂಬಂಧಿ ಕವಿತಾ ಎಂಬವರು ಎಡಪದವು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಮೂಡುಬಿದರೆಯಲ್ಲಿ ತಮ್ಮ ಸಂಬಂಧಿಕರ ಗೃಹಪ್ರವೇಶಕ್ಕೆಂದು ಇವರಿಬ್ಬರು ಕೆ.ಎ.19 ಸಿ-8949 ರಿಕ್ಷಾದಲ್ಲಿ ರಾತ್ರಿ 8-30ಕ್ಕೆ ಎಡಪದವಿನಿಂದ ಹೊರಟಿದ್ದರು. ತೋಡಾರು ತಿರುವು ಬಳಿ ರಿಕ್ಷಾ ಅತಿವೇಗದಲ್ಲಿತ್ತೆನ್ನಲಾಗಿದ್ದು ಚಾಲಕ ಒಮ್ಮೆಲೆ ಬ್ರೇಕ್ ಹಾಕಿದಾಗ ರಜನಿ ಎಂಬಾಕೆ ರಿಕ್ಷಾದಿಂದ ಹೊರಗೆಸೆಯಲ್ಪಟ್ಟು ತಲೆಗೆ ಗಂಭೀರ ಏಟು ಬಿತ್ತೆನ್ನಲಾಗಿದೆ.
ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಸಂಬಂಧಿ ಬಂಟ್ವಾಳ ಮಾಣಿ ಸೂರಿಕುಮೇರು ಧನಂಜಯ್ ಎಂಬವರು ನೀಡಿದ ದೂರಿನ ಮೇರೆಗೆ ರಿಕ್ಷಾ ಚಾಲಕ ಧನಂಜಯ್ ವಿರುದ್ಧ ಮೂಡುಬಿದರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
