ಬಂಟ್ವಾಳ : ತಾಲ್ಲೂಕಿನ ಭು ಅಭಿವೃದ್ಧಿ ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷರನ್ನು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಶನಿವಾರ ಅಭಿನಂದಿಸಿದರು. ಅಧ್ಯಕ್ಷರಾಗಿ ವಕೀಲ ಅರುಣ್ ರೋಶನ್ ಡಿಸೋಜ, ಉಪಾಧ್ಯಕ್ಷರಾಗಿ ಚಂದ್ರಶೇಖರ್ ಬಾಯಿಲ ಅವಿರೋಧ ಆಯ್ಕೆ.
ಪ್ರತಿಷ್ಠಿತ ಬಂಟ್ವಾಳ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಭು ಅಭಿವೃದ್ಧಿ) ಇದರ ನೂತನ ಅಧ್ಯಕ್ಷರಾಗಿ ಬಿ.ಸಿ.ರೋಡಿನ ಯುವ ನೋಟರಿ ವಕೀಲ ಅರುಣ್ ರೋಶನ್ ಡಿಸೋಜ ಮತ್ತು ಉಪಾಧ್ಯಕ್ಷರಾಗಿ ಚಂದ್ರಶೇಖರ್ ಬಾಯಿಲ ಇವರು ಅವಿರೋಧ ಆಯ್ಕೆಯಾಗಿದ್ದಾರೆ.
ತಹಶೀಲ್ದಾರ್ ರಶ್ಮೀ ಎಸ್.ಆರ್. ಚುನಾವಣಾಧಿಕಾರಿಯಾಗಿ ಶನಿವಾರ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಕಾಂಗ್ರೆಸ್ ಬೆಂಬಲಿತರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅವಿರೋಧ ಆಯೆ ನಡೆದಿದೆ. ಕಳೆದ ೨೦೨೦ರ ಜ.೨೫ ರಂದು ಚುನಾವಣೆ ನಡೆದಿದ್ದು, ಒಟ್ಟು ೧೨ ಸ್ಥಾನಗಳ ಪೈಕಿ ೭ ಮಂದಿ ಬಿಜೆಪಿ ಮತ್ತು ೫ ಮಂದಿ ಕಾಂಗ್ರೆಸ್ ಬೆಂಬಲಿತರು ಗೆದ್ದಿದ್ದರು.
ಹೈಕೋರ್ಟಿನಿಂದ ತಡೆ:
ಈ ಚುನಾವಣೆ ಅಕ್ರಮವಾಗಿದ್ದು, ಮತದಾರರ ಪಟ್ಟಿಯಲ್ಲಿ ನಿಧನರಾದ ಸದಸ್ಯರು ಕೂಡಾ ಮತ ಚಲಾಯಿಸಿದ್ದಾರೆ ಎಂದು ಆರೋಪಿಸಿ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಸುದರ್ಶನ ಜೈನ್ ಹೈಕೋರ್ಟು ಮೆಟ್ಟಿಲೇರಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ತಡೆಯಾಜ್ಞೆ ತಂದಿದ್ದರು. ಇದೀಗ ಎರಡು ವರ್ಷಗಳ ಕಾನೂನು ಸಮರದ ಬಳಿಕ ನ್ಯಾಯಾಲಯವು ಈ ವ್ಯಾಜ್ಯ ಇತ್ಯರ್ಥಗೊಳಿಸಿದ ಪರಿಣಾಮ, ಸುಮಾರು ೫೦ ವರ್ಷಗಳಿಂದ ಕಾಂಗ್ರೆಸ್ ಹಿಡಿತದಲ್ಲಿದ್ದ ಅಧಿಕಾರ ಇದೀಗ ಬಿಜೆಪಿ ಪ್ರಥಮ ಬಾರಿಗೆ ಅಧಿಕಾರದ ಗದ್ದುಗೆ ಏರಿದೆ. ಈ ನಡುವೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕ ರಾಜೇಶ್ ಬಾಳೆಕಲ್ಲು ಅವರು ಈಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರೆ, ಇನ್ನೊಂದೆಡೆ ಬಿಜೆಪಿ ಮುಖಂಡ ಸುದರ್ಶನ್ ಬಜ ನಾಮನಿರ್ದೇಶಿತ ನಿರ್ದೇಶಕರಾಗಿ ನೇಮಕಗೊಂಡು ಬಿಜೆಪಿ ಒಟ್ಟು ೯ ಸ್ಥಾನಕ್ಕೆ ಏರಿದೆ.
ಶಾಸಕರಿಂದ ಅಭಿನಂದನೆ:
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿದರು. ಮೈಸೂರು ಎಲೆಕ್ಟಿçಕಲ್ಸ್ ಮತ್ತು ಇಂಡಸ್ಟ್ರೀಸ್ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಪ್ರಮುಖರಾದ ಎಂ.ತುAಗಪ್ಪ ಬಂಗೇರ, ರವೀಂದ್ರ ಕಂಬಳಿ, ಬಿ.ದೇವದಾಸ್ ಶೆಟ್ಟಿ, ದೇವಪ್ಪ ಪೂಜಾರಿ, ಡೊಂಬಯ್ಯ ಅರಳ, ರವೀಶ್ ಶೆಟ್ಟಿ ಕರ್ಕಳ, ಪ್ರಭಾಕರ ಪ್ರಭು, ಸೋಮಪ್ಪ ಕೋಟ್ಯಾನ್, ಮೋಹನ್ ಪಿ.ಎಸ್., ರತ್ನಕುಮಾರ್ ಚೌಟ, ರಮಾನಾಥ ರಾಯಿ, ಪುರುಷೋತ್ತಮ ಶೆಟ್ಟಿ, ಗಣೇಶ್ ರೈ ಮಾಣಿ, ಪುಷ್ಪರಾಜ್ ಚೌಟ, ಯಶೋಧರ ಕರ್ಬೆಟ್ಟು, ರಶ್ಮೀತ್ ಶೆಟ್ಟಿ ಕೈತ್ರೋಡಿ, ಕೇಶವ ದೈಪಲ ಮತ್ತಿತರರು ಇದ್ದರು.
