ಬಂಟ್ವಾಳ:ಇಲ್ಲಿನ ಕಳ್ಳಿಗೆ ಗ್ರಾಮದ ಪ್ರಸಿದ್ಧ ದೇವಂದಬೆಟ್ಟು ಶ್ರೀ ಲಕ್ಷ್ಮೀವಿಷ್ಣುಮೂರ್ತಿ ದೇವಸ್ಥಾನದಲ್ಲಿ ರೂ 1ಕೋಟಿಗೂ ಮಿಕ್ಕಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆದು ಇದೇ 15ರಿಂದ 24ರತನಕ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಬ್ರಹ್ಮಕಲಶ ಸಮಿತಿ ಸಂಚಾಲಕ ಟಿ.ತಾರಾನಾಥ ಕೊಟ್ಟಾರಿ ವಿವರಿಸಿದರು.
ದೇವಳದಲ್ಲಿ ಶನಿವಾರ ಸಂಜೆ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿ, 3 ಗ್ರಾಮಗಳಿಗೆ ಸಂಬಂಧಪಟ್ಟ ಈ ದೇವಳದಲ್ಲಿ ಕಳೆದ 2004ರಲ್ಲಿ ದೇವರ ಗರ್ಭಗುಡಿಗೆ ತಾಮ್ರ ಹೊದಿಕೆ ಸಹಿತ ಧ್ವಜಸ್ತಂಭ (ಕೊಡಿಮರ) ಸಮರ್ಪಣೆ ಮತ್ತು ಬ್ರಹ್ಮಕಲಶ ನಡೆದಿದೆ. ಇದೀಗ ದೇವಳದ ಒಳಾಂಗಣಕ್ಕೆ ಶೀಟು ಅಳವಡಿಕೆ, ಹೊರಾಂಗಣದಲ್ಲಿ ತಡೆಗೋಡೆ, ಆವರಣ ಗೋಡೆ, ಗೋಶಾಲೆ, ಯಾಗ ಶಾಲೆ, ಉಗ್ರಾಣ ಕೊಠಡಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಸಾವಿರಾರು ಮಂದಿ ಸ್ವಯಂ ಸೇವಕರ ತಂಡವು ಹಗಲಿರುಳು ಶ್ರಮದಾನ ಸೇವೆ ಸಲ್ಲಿಸಿದ್ದಾರೆ ಎಂದರು.
ಫೆ.15ರಂದು ಹೊರೆಕಾಣಿಕೆ:
ಫೆ.15ರಂದು ಮಧ್ಯಾಹ್ನ 2 ಗಂಟೆಗೆ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಆಕರ್ಷಕ ಹೊರೆಕಾಣಿಕೆ ಮೆರವಣಿಗೆ ಹೊರಡುವ ಮೂಲಕ ಬ್ರಹ್ಮಕಲಶಕ್ಕೆ ಚಾಲನೆ ಸಿಗಲಿದೆ. ಅಂದು ಸಂಜೆ 7ಗಂಟೆಗೆ ಗೋಶಾಲೆ ಉದ್ಘಾಟನೆ ಮತ್ತು ಗೋಪೂಜೆ ಹಾಗೂ 48 ದಿನಗಳ ಅಖಂಡ ಸಂಧ್ಯಾ ಭಜನೆ ಮಂಗಲೋತ್ಸವ ನಡೆಯಲಿದೆ ಎಂದರು.
ಫೆ.18ರಂದು ಸಂಜೆ 6 ಗಂಟೆಗೆ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ಹೋಮ ಸಹಿತ ನವಾವರಣ ಕೀರ್ತನೆಯೊಂದಿಗೆ ಶ್ರೀ ಚಕ್ರಪೂಜೆ ನಡೆಯಲಿದೆ. 20ರಂದು ಬೆಳಿಗ್ಗೆ 8.33 ಗಂಟೆಗೆ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಮಾರ್ಗದರ್ಶನದಲ್ಲಿ ದೇವರಿಗೆ ದ್ರವ್ಯ ಮಿಲಿತ ಸಹಸ್ರ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಅಂದು ಸಂಜೆ 5 ಗಂಟೆಗೆ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಆರ್ ಎಸ್ ಎಸ್ ಮುಖಂಡ ಡಾ.ಕೆ. ಪ್ರಭಾಕರ ಭಟ್ ಕಲ್ಲಡ್ಕ ಧಾರ್ಮಿಕ ಉಪನ್ಯಾಸ ನೀಡುವರು. ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಹಲವು ಮಂದಿ ಗಣ್ಯರು ಭಾಗವಹಿಸುವರು. 20ರಿಂದ 24ರ ತನಕ ವಾರ್ಷಿಕ ಜಾತ್ರೆ ನಡೆಯಲಿದೆ.
ಶಾಸಕ ರಾಜೇಶ ನಾಯ್ಕ್ ಅವರು ದೇವಳಕ್ಕೆ ರೂ 10ಲಕ್ಷ ಅನುದಾನ ಒದಗಿಸಿದ್ದು, ರೂ 1 ಕೋಟಿ ವೆಚ್ಚದಲ್ಲಿ ವಿವಿಧ ಸಂಪರ್ಕ ರಸ್ತೆಗೆ ಡಾಂಬರೀಕರಣ ಮತ್ತು ಕಾಂಕ್ರಿಟೀಕರಣಗೊಳಿಸಿ ಗೋಶಾಲೆಗೆ 2 ಸೆಂಟ್ಸ್ ಜಮೀನು ಖರೀದಿಸಿ ದೇವಳಕ್ಕೆ ಹಸ್ತಾಂತರಿಸಿದ್ದಾರೆ.
ಸ್ಥಳೀಯ ನಿವಾಸಿ ದಿವಂಗತ ಶೀನ ಮೂಲ್ಯ ಇವರ ಕುಟುಂಬಿಕರಾದ ವಿನೋದ ಭೋಜ ಮೂಲ್ಯ ಎಂಬವರು 69 ಸೆಂಟ್ಸ್ ಜಮೀನು ಉಚಿತವಾಗಿ ದೇವಳಕ್ಕೆ ಹಸ್ತಾಂತರಿಸಿದ್ದಾರೆ.ಬ್ರಹ್ಮಕಲಶ ಮತ್ತು ಜಾತ್ರೆಗೆ ಒಟ್ಟು 60 ಸಾವಿರ ಮಂದಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು, ಈಗಾಗಲೇ 4ಸಾವಿರ ಮಂದಿ ಸ್ವಯಂ ಸೇವಕರು ಹೆಸರು ನೊಂದಾಯಿಸಿದ್ದಾರೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸದಾನಂದ ಶೆಟ್ಟಿ ರಂಗೋಲಿ ತಿಳಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ರಮೇಶ ಉಪಾಧ್ಯಾಯ ನೆತ್ತರಕೆರೆ, ಪ್ರಧಾನ ಕಾರ್ಯದರ್ಶಿ ದಾಮೋದರ ನೆತ್ತರಕೆರೆ, ಬ್ರಹ್ಮಕಲಶೋತ್ಸವ ಸಮಿತಿ ಸಮಿತಿ ಗೌರವಾಧ್ಯಕ್ಷ ನವೀನಚಂದ್ರಶೆಟ್ಟಿ ಮುಂಡಾಜೆಗುತ್ತು ಮಾಹಿತಿ ನೀಡಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಗಣೇಶ ಸುವರ್ಣ ತುಂಬೆ, ಕೋಶಾಧಿಕಾರಿ ಕವಿರಾಜ್ ಚಂದ್ರಿಗೆ, ಅರ್ಚಕ ರಾಧಾಕೃಷ್ಣ ಕಡಂಬಳಿತ್ತಾಯ, ಸದಸ್ಯರಾದ ಪುರುಷೋತ್ತಮ ಕೊಟ್ಟಾರಿ, ದಿವಾಕರ ಶೆಟ್ಟಿ, ಅಮಿತಾ ವಿಶ್ವನಾಥ, ಉಮಾ ಲಿಂಗಪ್ಪ, ಕಳ್ಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋಧಾ ಜಾರಂದಗುಡ್ಡೆ, ಪ್ರಮುಖರಾದ ನಾರಾಯಣ ಹೊಳ್ಳ, ರಾಘವೇಂದ್ರ ಕಾರಂತ, ಅನಿಲ್ ಪಂಡಿತ್, ಸುರೇಶ್ ಭಂಡಾರಿ, ಯೋಗೀಶ್ ದರಿಬಾಗಿಲು, ಸೋಮಪ್ಪ ಕೋಟ್ಯಾನ್, ದೇವಿಪ್ರಸಾದ್ ಎಂ, ಮನೋಹರ ಶೆಟ್ಟಿ, ಸುಬ್ರಹ್ಮಣ್ಯ ಶಿಬರಾಯ ಸುದ್ದಿಗೋಷ್ಠಿಯಲ್ಲಿ ಇದ್ದರು.
