ಸುರತ್ಕಲ್: ಶುಕ್ರವಾರ ಮುಂಜಾನೆ ಇಲ್ಲಿಗೆ ಸಮೀಪದ ಕಾಂತೇರಿ ಧೂಮಾವತಿ ದೈವಸ್ಥಾನ ಮುಂಭಾಗದ `ಸುರಭಿ ಬ್ಯೂಟಿಪಾರ್ಲರ್’ನಲ್ಲಿ ಕೆಲಸ ಮಾಡುವ ಕೃಷ್ಣಾಪುರ ಮೂಲದ ಅಕ್ಷತಾ(19) ಮೇಲೆ ಫೇಶಿಯಲ್ಗೆಂದು ಬಂದಿದ್ದ ಯುವತಿ ಹಾಗೂ ಆಕೆಯ ಜೊತೆಗಿದ್ದ ಯುವಕ ರಾಡ್ ಮತ್ತು ಚೂರಿಯಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಗಂಭೀರ ಗಾಯಗೊಂಡ ಆಕೆಯನ್ನು ತಕ್ಷಣವೇ ಇಲ್ಲಿನ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೃತ್ಯ ನಡೆಸಿ ಓಡಿಹೋಗುತ್ತಿದ್ದ ಜೋಡಿಯನ್ನು ಸಾರ್ವಜನಿಕರು ಬೆನ್ನಟ್ಟಿ ನಟರಾಜ್ ಥಿಯೇಟರ್ ಸಮೀಪ ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು.
ಸುರತ್ಕಲ್ ಠಾಣಾಧಿಕಾರಿ ನಟರಾಜ್ ನೇತೃತ್ವದಲ್ಲಿ ಜೋಡಿಯ ವಿಚಾರಣೆ ನಡೆದಿದ್ದು, ಜೋಡಿಯು ಅಕ್ಷತಾಳ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಲೂಟಿ ಮಾಡಲು ನಡೆಸಿದ ಕೃತ್ಯ ಎನ್ನುವುದು ಬಹಿರಂಗಗೊಂಡಿದೆ. ಕೃತ್ಯವೆಸಗಿ ಪೊಲೀಸ್ ವಶವಾಗಿರುವ ಜೋಡಿಯನ್ನು ರಾಜಸ್ಥಾನ ಮೂಲದ ಸಂದೀಪ್ ಕುಮಾರ್(34) ಮತ್ತು ಸುಮನ(26) ಎಂದು ಹೆಸರಿಸಲಾಗಿದೆ. ಗಾಯಾಳು ಅಕ್ಷತಾ ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂದೀಪ್ ಕುಮಾರ್ ಹಾಗೂ ಸುಮನ ಪತಿ-ಪತ್ನಿಯರಾಗಿದ್ದು ಇವರು ರಾಜಸ್ಥಾನದಿಂದ ಗೋವಾಕ್ಕೆ ಬಂದು ಅಲ್ಲಿ ಕೆಲಸ ಮಾಡಿಕೊಂಡಿದ್ದರು. ಆದರೆ ಕೆಲವು ಸಮಯಗಳ ಹಿಂದೆ ಇಬ್ಬರೂ ಕೆಲಸವನ್ನು ಕಳೆದುಕೊಂಡಿದ್ದು ಕೆಲಸವನ್ನು ಅರಸಿಕೊಂಡು ಐದು ದಿನಗಳ ಹಿಂದೆ ಬೈಕಂಪಾಡಿಗೆ ಬಂದಿದ್ದರು. ಹಾಗೆ ಬಂದವರು ಅಲ್ಲಿನ ಲಾಡ್ಜ್ನಲ್ಲಿ ತಂಗಿದ್ದರು.
ಶುಕ್ರವಾರ ಮುಂಜಾನೆ ಕೈಯಲ್ಲಿ ಹಣ ಇಲ್ಲದಾದಾಗ ಇಂಥ ಕುಕೃತ್ಯಕ್ಕೆ ಮುಂದಾಗಿದ್ದಾರೆ. ಸುರಭಿ ಬ್ಯೂಟಿಪಾರ್ಲರ್ಗೆ ಬಂದಿದ್ದ ಸುಮನ ತನ್ನ ಫೇಶಿಯಲ್ ಮಾಡುವಂತೆ ಅಕ್ಷತಾಳಲ್ಲಿ ಕೇಳಿಕೊಂಡಿದ್ದಾಳೆ. ಈ ವೇಳೆ ಸಂದೀಪ್ ಕೂಡಾ ಪಾರ್ಲರ್ ಒಳನುಗ್ಗಲು ನೋಡಿದ್ದು ಅಕ್ಷತಾ ತಡೆದಿದ್ದಾಳೆ. ಕೊನೆಗೆ ಫೇಶಿಯಲ್ ಮುಗಿಸಿಕೊಂಡು ಹೊರಬಂದ ಆಕೆ ಹಣ ಕೊಡುವಂತೆ ಸಂದೀಪ್ನನ್ನು ಕರೆದಿದ್ದಾಳೆ. ಈ ವೇಳೆ ಒಳನುಗ್ಗಿದ ಸಂದೀಪ್ ರಾಡ್ ಮತ್ತು ಚೂರಿಯಿಂದ ಅಕ್ಷತಾ ಮೇಲೆ ದಾಳಿ ನಡೆಸಿದ್ದಾನೆ. ಪತ್ನಿ ಸುಮನ ಕೂಡಾ ಆತನಿಗೆ ಸಾಥ್ ನೀಡಿದ್ದು ಚಿನ್ನದ ಸರ ಕಸಿಯಲು ನೋಡಿದ್ದಾಳೆ. ಅಷ್ಟರಲ್ಲಿ ಅಕ್ಷತಾ ಚಿನ್ನದ ಸರವನ್ನು ಗಟ್ಟಿಯಾಗಿ ಹಿಡಿದಿದ್ದು, ಅದು ತುಂಡಾಗಿ ಅಲ್ಲಿಯೇ ಬಿದ್ದಿತ್ತು, ಸ್ಥಳೀಯರು ಒಟ್ಟುಸೇರುವುದನ್ನು ಅರಿತು ಜೋಡಿ ಪರಾರಿಯಾಗಲು ಯತ್ನಿಸಿತ್ತು. ಹಾಡಹಗಲೇ ನಡೆದಿರುವ ಈ ಕೃತ್ಯ ಸುರತ್ಕಲ್ ಜನತೆಯನ್ನು ಬೆಚ್ಚಿಬೀಳಿಸಿತ್ತು.
ಹಲ್ಲೆ ನಡೆಸಿ ದರೋಡೆ ಪ್ರಕರಣ ದಾಖಲು:
ಸುರತ್ಕಲ್ ಠಾಣಾ ಪೊಲೀಸರು ಜೋಡಿಯ ಮೇಲೆ ಹಲ್ಲೆ ನಡೆಸಿ ದರೋಡೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಆರೋಪಿಗಳ ವಿಚಾರಣೆ ಮುಂದುವರಿದಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ಸುರತ್ಕಲ್ ಠಾಣಾಧಿಕಾರಿ ನಟರಾಜ್ ತಿಳಿಸಿದರು.





