ಬಂಟ್ವಾಳ: ತಾಲೂಕಿನಾದ್ಯಂತ ಮಸೀದಿ, ಮೊಹಲ್ಲಾಗಳಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ.) ಅವರ ಜನ್ಮ ದಿನವನ್ನು ಮಂಗಳವಾರ ಸರಳವಾಗಿ ಆಚರಿಸಲಾಯಿತು.
ತಾಲೂಕಿನ ಮಸೀದಿ, ಮದರಸಾಗಳಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು, ಧರ್ಮಗುರುಗಳು ಸೇರಿ ಧ್ವಜಾರೋಹಣ ಮಾಡಿ ಪ್ರವಾದಿ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಮದರಸಾ ವಿದ್ಯಾರ್ಥಿಗಳು, ಮೊಹಲ್ಲಾಗಳ ಜನರು ಉಪಸ್ಥಿತರಿದ್ದರು.
ಪ್ರವಾದಿ ಜನ್ಮ ದಿನಾಚರಣೆ ಪ್ರಯುಕ್ತ ತಾಲೂಕಿನ ಕೆಲವು ಮಸೀದಿಗಳಲ್ಲಿ ಸೋಮವಾರ ರಾತ್ರಿ ಸಾಮೂಹಿಕ ಮೌಲೀದ್ ಪಾರಾಯಣ ನೆರವೇರಿದರೆ ಉಳಿದ ಮಸೀದಿಗಳಲ್ಲಿ ಮಂಗಳವಾರ ಬೆಳಗ್ಗೆ ಹಾಗೂ ಮಧ್ಯಾಹ್ನ ಸಾಮೂಹಿಕ ಮೌಲೀದ್ ಪಾರಾಯಣ ನಡೆಯಿತು. ಮೌಲೀದ್ ಪಾರಾಯಣದ ಬಳಿಕ ತಬರ್ರುಕ್ ವಿತರಣೆ ನಡೆಯಿತು.
ಮೀಲಾದುನ್ನಬಿ ಪ್ರಯುಕ್ತ ಕೆಲವು ಮಸೀದಿಗಳಲ್ಲಿ ಬೆಳಗ್ಗೆ ದಫ್ ಸಾಂಸ್ಕೃತಿಕ ಕಾರ್ಯಕ್ರಮ ನಡೆದರೆ ರಾತ್ರಿ ಮದರಸಾ ಮಕ್ಕಳ ಪ್ರತಿಭಾ ಕಾರ್ಯಕ್ರಮ ನಡೆಯಿತು.
