ಕೈಕಂಬ: ಗುರುಪುರದ ಗೋಳಿದಡಿಗುತ್ತು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ ಅವರ ಗುತ್ತಿನ ಮನೆಯಲ್ಲಿ ಸೋಮವಾರ ಪಾವಂಜೆಯ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿಗೆ ವಾರ್ಷಿಕ ‘ತ್ರಿಕಾಲ ಪೂಜೆ’ ನೆರವೇರಿತು.
ವರ್ಷಂಪ್ರತಿ ನಡೆಯುವ ಈ ಪೂಜೆಯಂಗವಾಗಿ ಭಾನುವಾರ ರಾತ್ರಿ ಗುತ್ತಿನ ಮನೆಗೆ ಭಾನುವಾರ ರಾತ್ರಿ ಪಾವಂಜೆಯಿಂದ ಶ್ರೀ ಸುಬ್ರಹ್ಮಣ್ಯ ದೇವರ ಆಗಮನವಾಗಿದ್ದು, ಸೋಮವಾರ ಬೆಳಿಗ್ಗಿನಿಂದ ಪಾವಂಜೆಯ ಯಾಜಿ ನಿರಂಜನ ಭಟ್ ಮತ್ತು ಅವರ ಪೌರೋಹಿತ್ಯ ವರ್ಗದಿಂದ ದೇವರಿಗೆ ಪೂಜೆ-ಪುನಸ್ಕಾರ ನಡೆಯಿತು. ಹಣ್ಣುಗಳು ಮತ್ತು ಹೂವಿನ ಅಲಂಕಾರದೊಂದಿಗೆ ಸ್ಥಾಪಿಸಲಾದ ಶ್ರೀ ಸುಬ್ರಹ್ಮಣ್ಯ ಸಾಮಿಯ ಭವ್ಯ ಬಿಂಬದೆದುರು ಮಧ್ಯಾಹ್ನದವರೆಗೆ ಭಜನಾ ಕಾರ್ಯಕ್ರಮ, ನಂತರ ವಿಶೇಷ ಪೂಜೆ ನಡೆಯಿತು.
ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಬ್ರಹ್ಮಶ್ರೀ ಶಿರೋಮಣಿ `ವೇದ ಕೃಷಿಕ’ ಕೆ ಎಸ್ ನಿತ್ಯಾನಂದರ ಮಾರ್ಗದರ್ಶನದಲ್ಲಿ ನಡೆಯಿತು. ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಅವರ ಪತ್ನಿ ಉಷಾ ವಿ ಶೆಟ್ಟಿ ಮತ್ತು ಮಕ್ಕಳು ಪೂಜೆಯಲ್ಲಿ ವ್ರತಸ್ಥರಾಗಿ ಪಾಲ್ಗೊಂಡಿದ್ದರು. ಏತಮೊಗರುಗುತ್ತು ಸಾಧು ಯಾನೆ ಜಯ ಶೆಟ್ಟಿ, ರವಿ ಭಟ್ ಮಂಗಳೂರು, ರಾಮಣ್ಣ ಶೆಟ್ಟಿ ಮಿಜಾರು ಪಲ್ಕೆ, ಬೆಳ್ಳಿಬೆಟ್ಟುಗುತ್ತು ರಮೇಶ್ ಶೆಟ್ಟಿ, ಸುನಿಲಾ ಪ್ರಭಾಕರ ಶೆಟ್ಟಿ, ಚಂದ್ರಕಾಂತ ಗುರೂಜಿ ಮಂಗಳೂರು ಹಾಗೂ ಇನ್ನಿತರ ಗಣ್ಯರು, ಭಕ್ತರು ಪಾಲ್ಗೊಂಡಿದ್ದರು. ಪೂಜೆಯ ಬಳಿಕ ದೇವರ ಪ್ರಸಾದ ವಿತರಣೆ ನಡೆಯಿತು.
ಸಂಜೆ ಮತ್ತೊಂದು ಸುತ್ತಿನ ಪೂಜೆ ನಡೆಯಿತು. ಸಮಾಪನ ಕಾರ್ಯಕ್ರಮದ ಬಳಿಕ ಶ್ರೀ ಸುಬ್ರಹ್ಮಣ್ಯ ದೇವರ ಮೂರ್ತಿಯನ್ನು ಮರಳಿ ಪಾವಂಜೆ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು.
