ಕೋಲಾರ: ಅನ್ನದಾತರು ಸಂಕಷ್ಟದಲ್ಲಿದ್ದಾರೆ, ಅವರ ನೆರವಿಗೆ ಬ್ಯಾಂಕ್ ನಿಲ್ಲಬೇಕಾಗಿದೆ, ಬೆಳೆ ಬೆಳೆಯುವ ಪ್ರಾಮಾಣಿಕ ರೈತರನ್ನು ಗುರುತಿಸಿ ಅವರಿಗೆ ಸಾಲ ಸೌಲಭ್ಯ ನೀಡುವ ಜವಾಬ್ದಾರಿ ನಮ್ಮದಾಗಿದ್ದು, ಅಧಿಕಾರಿಗಳು ಬದ್ದತೆಯಿಂದ ಕೆಲಸ ಮಾಡಿ ಠೇವಣಿ ಸಂಗ್ರಹಕ್ಕೂ ಒತ್ತು ನೀಡಿ ಎಂದು ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.1ಬ್ಯಾಂಕಿನ ಸಭಾಂಗಣದಲ್ಲಿ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲಾ ಶಾಖೆಗಳ ಅಧಿಕಾರಿ,ಸಿಬ್ಬಂದಿಯೊಂದಿಗೆ ಆನ್‌ಲೈನ್ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು. ಸಣ್ಣ,ಅತಿಸಣ್ಣ ರೈತರಿಗೆ ಸಾಲ ನೀಡಲು ಆದ್ಯತೆ ನೀಡಿ, ಬಡವರು ಎಂದೂ ಬ್ಯಾಂಕಿಗೆ ವಂಚನೆ ಮಾಡುವುದಿಲ್ಲ, ೧೦ ಗುಂಟೆ, ೨೦ ಗುಂಟೆ ಜಮೀನಿನಲ್ಲೂ ಬದುಕು ಕಟ್ಟಿಕೊಳ್ಳುವ ಸಣ್ಣ ರೈತರಿದ್ದಾರೆ ಅವರಿಗೆ ಮೊದಲು ಸಾಲ ನೀಡಿ ಕೈಹಿಡಿಯೋಣ ಎಂದರು.

ಸಾಲ ನೀಡಿಕೆಗೆ ಜಾತಿ,ಧರ್ಮ, ಪಕ್ಷ ನೋಡದಿರಿ, ನಿಜವಾಗಿಯೂ ಬೆಳೆ ಬೆಳೆಯುವ ರೈತರೇ ನಮ್ಮ ಆದ್ಯತೆಯಾಗಬೇಕು,ಸೊಸೈಟಿಗಳಿಗೆ ಸಾಲಕ್ಕೆ ಪ್ರಸ್ತಾವನೆ ಸಿದ್ದಪಡಿಸಿಕೊಳ್ಳಲು ತಿಳಿಸಿ ಎಂದರು. ಈ ಕೂಡಲೇ ಉಪನೋಂದಣಾಧಿಕಾರಿಗಳಿಗೂ ಬ್ಯಾಂಕಿನ ಕೇಂದ್ರ ಕಚೇರಿಯಿಂದ ಪತ್ರಬರೆದು ಸಾಲಕ್ಕಾಗಿ ಜಮೀನು ಮಾರ್ಟ್ಗೇಜ್ ಮಾಡುವ ರೈತರನ್ನು ಅಲೆಸದೇ ಅರ್ಜಿ ಹಾಕಿದ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕೋರಲು ತಿಳಿಸಿದರು.

ಠೇವಣಿ ಸಂಗ್ರಹ ಗುರಿ ಸಾಧಿಸಿ ನಿಮಗೆ ಬ್ಯಾಂಕ್ ಅನ್ನ ನೀಡುತ್ತಿದೆ, ನಿಮ್ಮಕುಟುಂಬ ಪೋಷಿಸುತ್ತಿದೆ ಆದ್ದರಿಂದ ನಿಮಗೆ ಜವಾಬ್ದಾರಿ ಇರಬೇಕು, ಠೇವಣಿ ಸಂಗ್ರಹದಲ್ಲಿ ನಾವು ಹಿಂದುಳಿದರೆ ರೈತರು,ಮಹಿಳೆಯರಿಗೆ ನೆರವಾಗಲು ಕಷ್ಟವಾಗುತ್ತದೆ, ಅಪೇಕ್ಸ್ ಬ್ಯಾಂಕ್,ನಬಾರ್ಡ್ಗಳಲ್ಲಿ ನಮ್ಮ ಬ್ಯಾಂಕಿಗೆ ಹೆಚ್ಚಿನ ಗೌರವವಿದೆ, ಅದಕ್ಕೆ ಚ್ಯುತಿಯಾಗಬಾರದು, ನಾವು ತಲೆಯೆತ್ತಿ ಅಲ್ಲಿಗೆ ಹೋಗುವ ವಾತಾವರಣ ನಿರ್ಮಿಸುವುದು ನಿಮ್ಮ ಹೊಣೆ ಎಂದರು. ನಿಮ್ಮಿಂದಾಗಿ ತಲೆತಗ್ಗಿಸುವ ಪರಿಸ್ಥಿತಿ ಬಂದರೆ ಖಂಡಿತಾ ಸಹಿಸೊಲ್ಲ, ಪ್ರತಿದಿನ ಠೇವಣಿ ಸಂಗ್ರಹದ ಮಾಹಿತಿ ನನಗೆ ಅಪ್‌ಡೇಟ್ ಮಾಡಿ, ಗುರುವಾರ ಬೆಳಗ್ಗೆ ೯ ಗಂಟೆಗೆ ಆನ್‌ಲೈನ್ ಸಭೆಯಲ್ಲಿ ನನಗೆ ಠೇವಣಿ ಸಂಗ್ರಹ, ಇ-ಶಕ್ತಿ ಅನುಷ್ಟಾನ, ವಿವಿಧೋದ್ದೇಶ ಸೇವಾ ಕೇಂದ್ರ ರಚನೆ ಕುರಿತ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು.

ಜು.೩೦ರೊಳಗೆ ಇ-ಶಕ್ತಿ ಮುಗಿಸಿ ಎರಡೂ ಜಿಲ್ಲೆಗಳ ಬ್ಯಾಂಕಿನ ಎಲ್ಲಾ ಶಾಖೆಗಳು ಜು.೩೦ರೊಳಗೆ ಇ-ಶಕ್ತಿ ಅನುಷ್ಟಾನವನ್ನು ಶೇ.೧೦೦ ಮುಗಿಸಿರಬೇಕು, ಇ-ಶಕ್ತಿ ಅನುಷ್ಟಾನದ ಹೊಣೆ ಹೊತ್ತಿರುವ ೨೩೫ ಪ್ರೇರಕರನ್ನು ಮುಂದಿನ ಸಭೆಗೆ ಕರೆ ತನ್ನಿ ಅದು ಬ್ಯಾಂಕ್ ಮ್ಯನೇಜರ್‌ಗಳ ಜವಾಬ್ದಾರಿ ಎಂದರು. ಮಹಿಳಾ ಸ್ವಸಹಾಯ ಸಂಘಗಳ ಸಾಲಗಳ ನವೀಕರಣ ಪ್ರಸ್ತಾವನೆ ಶೀಘ್ರ ಸಲ್ಲಿಸಿ, ಯಾವುದೇ ಸಾಲ ಎನ್‌ಇಎಸ್ ಆಗದಂತೆ ವಸೂಲಾಗಿ ಬದ್ದತೆಯಿಂದ ಮಾಡಿ, ರಜೆ,ಸ್ವಂತ ಕೆಲಸ ಬಿಟ್ಟು ಬ್ಯಾಂಕಿನ ಕೆಲಸ ಮಾಡಿ ಎಂದರು. ಸಭೆಯಲ್ಲಿ ಎಜಿಎಂಗಳಾದ ಬೈರೇಗೌಡ, ಖಲೀಮುಲ್ಲಾ, ಅರುಣ್‌ಕುಮಾರ್, ಸಿಬ್ಬಂದಿ ಹ್ಯಾರೀಸ್, ಜಬ್ಬಾರ್, ಶುಭಾ, ಮಮತಾ, ಬಾಲಾಜಿ, ಬೇಬಿಶಾಮಿಲಿ ಮತ್ತಿತರರಿದ್ದರು. ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬ್ಯಾಂಕ್ ಸಭಾಂಗಣದಲ್ಲಿ ಅವಿಭಜಿತ ಜಿಲ್ಲೆಯ ಎಲ್ಲಾ ಶಾಖೆಗಳ ಅಧಿಕಾರಿಗಳೊಂದಿಗೆ ಆನ್‌ಲೈನ್ ಸಭೆ ನಡೆಸಿದರು.

By suddi9

Leave a Reply

Your email address will not be published. Required fields are marked *