ಬಂಟ್ವಾಳ :ತಾಲ್ಲೂಕಿನ ವಗ್ಗ ಸಮೀಪದ ಕಾಡಬೆಟ್ಟು ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಬುಧವಾರ ಏರ್ಪಡಿಸಿದ್ದ ಧಾರ್ಮಿಕ ಸಭೆ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಉದ್ಘಾಟಿಸಿದರು. ಧರ್ಮದರ್ಶಿ ಕೆ.ಎಸ್.ಪಂಡಿತ್ ಮತ್ತಿತರರು ಇದ್ದಾರೆ. ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನ ಮೂಲಭೂತ ಸೌಕರ್ಯ ನೀಡಲು ಆದ್ಯತೆ: ಎಂ.ತುಂಗಪ್ಪ ಬಂಗೇರ ಹೇಳಿಕೆ
ಪರಶುರಾಮ ಋಷಿ ತಪಸ್ಸು ಮಾಡಿದ ‘ತಪೋಭೂಮಿ’ ಎಂದೇ ಗುರುತಿಸಿಕೊಂಡ ವಗ್ಗ ಸಮೀಪದ ಕಾಡಬೆಟ್ಟು ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಮುಂದಿನ ವರ್ಷ ನಡೆಯಲಿರುವ ದೇವರ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವಕ್ಕೆ ಶಾಸಕ ರಾಜೇಶ ನಾಯ್ಕ್ ಅವರ ಮೂಲಕ ಇಲ್ಲಿನ ಸಂಪರ್ಕ ರಸ್ತೆಗೆ ಸಂಪೂರ್ಣ ಕಾಂಕ್ರಿಟೀಕರಣಗೊಳಿಸಲು ಪ್ರಯತ್ನಿಸುವುದಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಹೇಳಿದ್ದಾರೆ.
ಇಲ್ಲಿನ ವಗ್ಗ ಸಮೀಪದ ಕಾಡಬೆಟ್ಟು ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ೧೫ನೇ ವರ್ಷದ ಪ್ರತಿಷ್ಠಾ ವರ್ಧಂತಿ ಉತ್ಸವ ಮತ್ತು ೪೭ನೇ ವರ್ಷದ ಭಜನಾ ಮಂಗಲೋತ್ಸವ ಪ್ರಯುಕ್ತ ಬುಧವಾರ ರಾತ್ರಿ ಏರ್ಪಡಿಸಿದ್ದ ಧಾರ್ಮಿಕ ಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಬಿ.ರಘು ಸಪಲ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವಳದ ಸುತ್ತು ಗೋಪುರಕ್ಕೆ ರೂ ೧.೨೫ಲಕ್ಷ ವೆಚ್ಚದಲ್ಲಿ ಹಂಚು ಅಳವಡಿಸುವುದಾಗಿ ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಎಸ್.ಮಾವೆ, ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ನಾಗೇಶ ಕಲ್ಲಡ್ಕ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ಬಾಬು ಕುಲಾಲ್ ಶುಭ ಹಾರೈಸಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ಕೆ.ಎಸ್.ಪಂಡಿತ್, ಪಿಲಾತಬೆಟ್ಟು ಸೇವಾ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಎಂ.ಬೂಬ ಸಪಲ್ಯ, ಬೆಂಕಿನಾಥೇಶ್ವರ ಯಕ್ಷಗಾನ ಮೇಳದ ವ್ಯವಸ್ಥಾಪಕ ಸದಾನಂದ ಮಲ್ಲಿ, ಉತ್ಸವ ಸಮಿತಿ ಅಧ್ಯಕ್ಷ ರಮೇಶ ನಾಯ್ಕ, ಉಪಾಧ್ಯಕ್ಷ ಜಯ ಪೂಜಾರಿ ಮತ್ತಿತರರು ಇದ್ದರು. ಇದೇ ವೇಳೆ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ ಎನೆಕಲ ಇವರನ್ನು ಸಾಯಿ ಫ್ರೆಂಡ್ಸ್ ವತಿಯಿಂದ ಅಭಿನಂದಿಸಿದರು.
ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ರಾಯಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಶಿಕ್ಷಕ ಬಿ.ಉದಯ ಕುಮಾರ್ ಮಧ್ವ ವಂದಿಸಿದರು.
ಇದೇ ವೇಳೆ ಗಾಯಕಿ ಚೈತ್ರಾ ಗಾಣಿಗ ನೇತೃತ್ವದಲ್ಲಿ ಮಂಗಳೂರು ಡಮರುಗ ಮ್ಯಾಜಿಕಲ್ ತಂಡದಿಂದ ‘ಭಕ್ತಿ ಗಾನ ವೈಭವ’, ಮತ್ತು ಬೆಂಕಿನಾಥೇಶ್ವರ ಮೇಳದಿಂದ ‘ಭಾರ್ಗವ ವಿಜಯ’ – ‘ಶ್ರೀನಿವಾಸ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಂಡಿತು.
