ಮಂಗಳೂರು: ಭಜರಂಗದಳ ಸಂಘಟನೆಯ ಸಕ್ರಿಯ ಕಾರ್ಯಕರ್ತ ವಾಮಂಜೂರು-ಮೂಡುಶೆಡ್ಡೆ ನಿವಾಸಿ ಚರಣ್ ಎಂಬಾತನ ಮೇಲೆ ಕಾವೂರು ಠಾಣಾಧಿಕಾರಿ ಉಮೇಶ್ ಕುಮಾರ್ ಮತ್ತು ಇಬ್ಬರು ಸಿಬ್ಬಂದಿ ವಿನಾಕಾರಣ ಮಾರಣಾಂತಿಕ ಹಲ್ಲೆಗೈದಿರುವ ಕೃತ್ಯವನ್ನು ಖಂಡಿಸಿ ಭಜರಂಗದಳ ಸಂಘಟನೆ ಕಾರ್ಯಕರ್ತರು ಶನಿವಾರವೂ ಧರಣಿ ನಡೆಸಿದರು. ಪೊಲೀಸ್ ಠಾಣೆಗೆ ಘೇರಾವ್ ಹಾಕದಂತೆ ಕಾರ್ಯಕರ್ತರನ್ನು ಮಾರ್ಗದಲ್ಲೇ ತಡೆದ ಕಾರಣ ನೂರಾರು ಕಾರ್ಯಕರ್ತರು ರಸ್ತೆಯಲ್ಲೇ ಪ್ರತಿಭಟನೆ ನಡೆಸುತ್ತಿದ್ದಾರೆ.
IMG-20141018-WA0009

IMG-20141018-WA0006

ಮೂಡುಶೆಡ್ಡೆ ನಿವಾಸಿ ಚರಣ್ ಪ್ರಕರಣವೊಂದಕ್ಕೆ ಸಂಬಂಧಿಸಿ ಪೊಲೀಸ್ ಠಾಣೆಗೆ ಹಾಜರಾಗದೆ ನೇರವಾಗಿ ನ್ಯಾಯಾಲಯಕ್ಕೆ ಶರಣಾಗಿ ಬಳಿಕ ಜಾಮೀನು ಪಡೆದುಕೊಂಡಿದ್ದರು. ಇದನ್ನೇ ನೆಪವನ್ನಾಗಿಸಿ ಕೆಲವು ದಿನಗಳ ಹಿಂದೆ ಚರಣ್ ಮನೆಗೆ ಹೋಗಿದ್ದ ಎಸ್.ಐ. ಉಮೇಶ್ ಕುಮಾರ್, ಸಿಬ್ಬಂದಿ ಶರತ್ ಹಾಗೂ ಇನ್ನೊಬ್ಬರು ಚರಣ್ ಮೇಲೆ ರಸ್ತೆಯಲ್ಲೇ ಹಲ್ಲೆ ನಡೆಸಿದ್ದಲ್ಲದೆ, ಜೀಪಿನಲ್ಲಿ ಎತ್ತಾಕಿಕೊಂಡು ಕಾವೂರು ಠಾಣೆಗೆ ಕರೆದೊಯ್ದಿದ್ದಲ್ಲದೆ ಅಲ್ಲಿ ಸಿಮೆಂಟ್ ಕಂಬಕ್ಕೆ ಹಗ್ಗದಿಂದ ಕಟ್ಟಿಹಾಕಿ ಲಾಠಿ ಮತ್ತು ಬೂಟಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಬೆದರಿಕೆಯೊಡ್ಡಿದ್ದರು ಎಂಬ ಆರೋಪ ಕೇಳಿಬಂದಿದೆ.

ಚರಣ್ ಪೊಲೀಸರ ಹಲ್ಲೆಯಿಂದ ಗಂಭೀರ ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಭಜರಂಗದಳ ಸಂಘಟನೆ ವಾರದ ಹಿಂದೆ ಕಾವೂರು ಎಸ್.ಐ. ಹಾಗೂ ಸಿಬ್ಬಂದಿ ಮೇಲೆ ಕಠಿಣ ಕ್ರಮಕ್ಕೆ ಆಗ್ರಹಿಸಿ ನಗರದಲ್ಲಿ ಪ್ರತಿಭಟನೆ ನಡೆಸಿ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿಯನ್ನೂ ಸಲ್ಲಿಸಿತ್ತು. ಆದರೆ ಯಾವುದೇ ಕ್ರಮವನ್ನು ಇಲಾಖೆ ಕೈಗೊಳ್ಳದ ಹಿನ್ನೆಲೆಯಲ್ಲಿ ಶುಕ್ರವಾರ ಕಾವೂರು ಠಾಣೆಗೆ ಮುತ್ತಿಗೆ ಹಾಕಲು ಸಂಘಟನೆ ಯತ್ನಿಸಿತ್ತು. ಆದರೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಸಂಘಟನೆ ಕಾರ್ಯಕರ್ತರನ್ನು ತಡೆದಿದ್ದರಿಂದ ಶನಿವಾರ ಮತ್ತೆ ಧರಣಿಯನ್ನು ಮುಂದುವರಿಸಲಾಗಿದೆ

By Suddi9

Leave a Reply

Your email address will not be published. Required fields are marked *