ಕೈಕಂಬ : ಕೊರೋನಾ ಮಹಾಮಾರಿ ಕ್ಷೀಣಿಸುತ್ತಿದ್ದಂತೆ ಶಾಲೆಗಳು ಆರಂಭವಾಗುತ್ತಿದ್ದು, ವಾಮಂಜೂರಿನ ವಿದ್ಯಾಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೧೦ನೇ ತರಗತಿ ಆರಂಭಿಸುವ ಕುರಿತಾಗಿ ಶನಿವಾರ(ಜ. ೨) ಶಾಲಾ ಆಡಳಿತ ಮಂಡಳಿ ಕರೆದಿರುವ ಪಾಲಕರ ಸಭೆಗೆ ಪಾಲಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಶಾಲಾ ಸಂಚಾಲಕಿ ಸಿಸ್ಟರ್ ಜೋಯೆಲ್ ಮಾತನಾಡಿ, ೨೦೨೦ರಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೂ ಪರಿಣಾಮ ಬೀರಿದೆ. ಕಳೆದ ವರ್ಷದ ಶಿಕ್ಷಣ ಕಹಿಯಾಗಿದ್ದರೆ, ಹೊಸ ವರ್ಷದಲ್ಲಿ(೨೦೨೧) ಮಕ್ಕಳ ಭವಿಷ್ಯ ಉಜ್ವಲವಾಗಲಿ. ೧೦ನೇ ತರಗತಿ ವಿದ್ಯಾರ್ಥಿಗಳ ಶಾಲಾ ಹಾಜರಾತಿಗಾಗಿ ಸರ್ಕಾರ ಹೊರಡಿಸಿರುವ ಕೋವಿಡ್-೧೯ ಮಾರ್ಗಸೂಚಿಯನ್ನು ಕ್ರಮಶಃ ಪಾಲಿಸುವಲ್ಲಿ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಮತ್ತು ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದರು.
ವಿದ್ಯಾಜ್ಯೋತಿ ಶಾಲೆಯ ೧೦ನೇ ತರಗತಿ ಮಂಗಳವಾರದಿಂದ(ಜ. ೫) ಆರಂಭವಾಗಲಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಬೆಳಿಗ್ಗೆ ೧೦ರಿಂದ ಅಪರಾಹ್ನ ೧೨:೩೦ರವರೆಗೆ ತರಗತಿ ಇರುವುದು. ಶಿಕ್ಷಕಿ ಮರ್ಸಿ ಪಿಂಟೋ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದ ಶಿಕ್ಷಕಿ ಚಂಚಲಾಕ್ಷಿ ಸರ್ಕಾರ ಹೊರಡಿಸಿರುವ ಮಾರ್ಗಸೂಚಿ ವಾಚಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಸಿಲ್ವಿಯಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ವೆರೋನಿಕಾ, ರಕ್ಷಕ-ಶಿಕ್ಷಕ ಸಂಘದ(ಪಿಟಿಎ) ಅಧ್ಯಕ್ಷ ರಜಾಕ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕ ಪ್ರದೀಪ್ ವಂದಿಸಿದರು.
