ಮೂಡುಬಿದಿರೆ: ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿ, ಕಳವುಗೈದ ನಗದು ಮತ್ತು ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ನವೆಂಬರ್ 11ರಂದು ಪುತ್ತಿಗೆ ಗ್ರಾಮದ ಹಂಡೇಲು ಮೈಟ್ ಕಾಲೇಜು ಬಳಿ ಇರುವ ಸಾರಮ್ಮ ಎಂಬವರ ಮನೆಯ ಬಾಗಿಲು ಮುರಿದು ಕಳ್ಳರು, ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ಕಳವುಗೈದಿದ್ದರು. ಕಾಸರಗೋಡು ಮುಗ್ರಲ್ ನಿವಾಸಿ ಇಬ್ರಾಹಿಂ ಖಲಂದರ್(38), ಶಿವಮೊಗ್ಗದ ಮಹಮ್ಮದ್ ಮುದಸೀರ್(20), ಮೂಡುಬಿದಿರೆ ಕೋಟೆಬಾಗಿಲು ನಿವಾಸಿ ಶಾಹೀಂ ಸಿದ್ದೀಕ್(23) ಬಂಧಿತ ಆರೋಪಿಗಳು. ಕಳವು ಸೊತ್ತುಗಳನ್ನು ಖರೀದಿಸಿದ ಆರೋಪದಡಿ ಉಪ್ಪಳದ ಹಿದಾಯತ್ ನಗರ ಗೋಲ್ಡ್‍ಕಿಂಗ್ ಚಿನ್ನದಂಗಡಿಯ ಮಾಲಕ ಮಹಮ್ಮದ್ ಹನೀಫ್(40) ಎಂಬಾತನನ್ನು ಕೂಡ ಬಂಧಿಸಲಾಗಿದೆ. ಬಂಧಿತರಿಂದ 11 ಸಾವಿರ ರೂಪಾಯಿ ನಗದು, ಸುಮಾರು 23 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್, ಉಪ ಪೊಲೀಸ್ ಆಯುಕ್ತ ಹರಿರಾಮ್ ಶಂಕರ್, ವಿನಯ್ ಗಾಂವಕರ್ ಅವರ ಮಾರ್ಗದರ್ಶನದಂತೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಬೆಳ್ಳೆಯಪ್ಪ, ಮೂಡುಬಿದಿರೆ ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್ ಬಿ.ಎಸ್, ಉಪ ಪೊಲೀಸ್ ನಿರೀಕ್ಷಕ ಸುದೀಪ್ ಎಂ.ವಿ ಮತ್ತು ಸಿಬ್ಬಂದಿಗಳಾದ ಚಂದ್ರಹಾಸ ರೈ, ಅಖಿಲ್ ಅಹಮ್ಮದ್, ಸುಜನ್, ಸಂತೋಷ್, ಬಸವರಾಜ್ ಪಾಟೀಲ್, ಯಶವಂತ್ ಕುಮಾರ, ಶಿವರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
