ಕೈಕಂಬ:ಕ್ಷೇತ್ರದ ಗ್ರಾಮೀಣ ಭಾಗದ ರಸ್ತೆಗಳ ಅಗತ್ಯ ಅಭಿವೃದ್ಧಿಯ ಸಲುವಾಗಿ ರಾಜ್ಯ ಸರಕಾರ ವಿಶೇಷ ಅನುದಾನ ಯೋಜನೆಯಲ್ಲಿ 25 ಕೋಟಿ ರೂಪಾಯಿ ಮಂಜೂರು ಮಾಡಲು ಈಗಾಗಲೇ ಸಮ್ಮತಿಸಿದೆ ಎಂದು ಶಾಸಕ ಡಾ. ಭರತ್ ವೈ ಶೆಟ್ಟಿ ಅವರು ಹೇಳಿದ್ದಾರೆ.ಎಡಪದವು -ಕುಪ್ಪೆಪದವು – ಮೂಲರಪಟ್ನ ಹೆದ್ದಾರಿ ಅಭಿವೃದ್ಧಿಯ 9.67 ಕೋಟಿ ರೂಪಾಯಿಗಳ ಕಾಮಗಾರಿಗೆ ಶನಿವಾರ ಎಡಪದವಿನಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಸರಕಾರದಿಂದ ವೈದ್ಯಕೀಯ ಕಾಲೇಜೊಂದು ಮಂಜೂರಾಗಿದ್ದು ಈಗಾಗಲೇ 30 ಎಕರೆ ಜಾಗ ಗುರುತಿಸಲಾಗಿದೆ ಎಂದು ಅವರು ಹೇಳಿದರು ಎಡಪದವು -ಕುಪ್ಪೆಪದವಿಗಾಗಿ ಮೂಲರಪಟ್ನ ಸೇತೆವೆ ವರೆಗಿನ ಹೆದ್ದಾರಿ ಕಾಮಗಾರಿ ಪ್ರಾರಂಭಗೊಳ್ಳಲಿದ್ದು ಮಂಗಳೂರು ಬಂಟ್ವಾಳ ತಾಲೂಕುಗಳ ಪ್ರಮುಖ ಸಂಪರ್ಕ ರಸ್ತೆಯ ಶೀಘ್ರ ಅಭಿವೃದ್ಧಿಗೆ ಒತ್ತು ನೀಡಲಾಗಿದೆ ಎಂದು ಶಾಸಕ ಭರತ್ ಶೆಟ್ಟಿ ಹೇಳಿದರು.

ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ ಗೌಡ ಅವರು ಮಾತನಾಡಿ ಎಡಪದವು ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ ಆರು ಹಿಂದೂ ರುದ್ರಭೂಮಿಗಳ ಅಭಿವೃದ್ಧಿಗೆ ಅನುದಾನ ಒದಗಿಸಲು ಈಗಾಗಲೇ ಸಮ್ಮತಿ ದೊರೆತಿದ್ದು, ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಆರೋಗ್ಯ ಸೇವೆಯ ಸಲುವಾಗಿ ಉನ್ನತ ಮಟ್ಟದ ಫಾರ್ಮಸಿ ಸ್ಥಾಪನೆ, ಆಯುಷ್ ವನ, ಕೆರೆಗಳ ಅಭಿವೃದ್ಧಿಗಾಗಿ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ತಾಲೂಕು ಪಂಚಾಯತ್ ಸದಸ್ಯ ನಾಗೇಶ್ ಶೆಟ್ಟಿ, ಎಡಪದವು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಂಗಾಧರ್, ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಪ್ರಸಾದ್ ಕುಮಾರ್ ಎಂ., ಅಕ್ರಮ ಸಕ್ರಮ ಸಮಿತಿ ಸದಸ್ಯ ಗಣೇಶ್ ಪಾಕಜೆ, ಎ ಪಿ ಎಂ ಸಿ ಸದಸ್ಯ ರುಕ್ಮಯ ನಾಯ್ಕ್, ಎಂಜಿನೀಯರ್ ಸಂಜೀವ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು ಕುಶಾಲ್ ಕುಮಾರ್ ನಿರೂಪಿಸಿದರು.
