ಬಂಟ್ವಾಳ: ಕೊರೋನ ಮಹಾಮಾರಿಯು ಒಂದೆಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಗ್ರಾಮ ಸರಕಾರ ರಚನೆಯ “ಹಳ್ಳಿಸಮರ”ಕ್ಕೆ ರಾಜಕೀಯಪಕ್ಷಗಳು ರಂಗ ತಾಲೀಮು ನಡೆಸುತ್ತಿದೆ. ಚುನಾವಣಾ ಆಯೋಗ ಗ್ರಾ.ಪಂ.ನ ಮಿನಿ ಎಲೆಕ್ಷನ್ ಗೆ ಎಲ್ಲಾ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದ್ದು, ಆಕ್ಟೋಬರ್ ಅಂತ್ಯಕ್ಕೆ ಅಥವಾ ನವಂಬರ್ ತಿಂಗಳ ಪ್ರಥಮ ವಾರದಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳಿವೆ ಎನ್ನಲಾಗಿದೆ. 
ನೋಡಲ್ ಅಧಿಕಾರಿ:
ಚುನಾವಣೆಯ ಹಿನ್ಬಲೆಯಲ್ಲಿ ಚುನಾವಣಾ ಆಯೋಗವು ಕೆಲ ಮಾರ್ಗಸೂಚಿಯನ್ನು ಪ್ರಕಟಿಸಿದ್ದು,ಇದನ್ನು ಕಟ್ಟುನಿಟ್ಟಾಗಿ ಅನುಸರಿಸಲು ಮತ್ತು ಉಸ್ತುವಾರಿ ನಡೆಸಲು ಪ್ರತಿ ವಿಧಾನಸಭಾ ಕ್ಷೇತ್ರವಾರು ಆರೋಗ್ಯ ನೋಡಲ್ ಅಧಿಕಾರಿಯನ್ನು ನೇಮಿಸಲು ಸೂಚಿಸಿದೆ. ಪ್ರತಿಮತಗಟ್ಟೆಗೆ ಇದ್ದಂತ 1500 ಮತದಾರರ ಸಂಖ್ಯೆಯನ್ನು 1000 ಕ್ಕೆ ಮಿತಿಗೊಳಿಸಿದೆ.
ಯಾವುದೇ ಮತದಾರರಿಗೆ ಮೊದಲು ಥರ್ಮಲ್ ಸ್ಕ್ಯಾನಿಂಗ್ ಮಾಡಿದಾಗ ನಿಗದಿತ ತಾಪಮಾನಕ್ಕಿಂತ ಹೆಚ್ಚಿದ್ದಲ್ಲಿ ಆ ಮತದಾರರನ್ನು ಎರಡುಬಾರಿ ಥರ್ಮಲ್ ಸ್ಕ್ಯಾನಿಂಗ್ ಮಾಡಬೇಕು,ಅಗಲೂ ಮೊದಲ ತಾಪಮಾನವಿದ್ದರೆ ಅಂತಹ ಮತದಾರನಿಗೆ ಟೋಕನ್ ನೀಡಿ ಮತದಾನದ ಅಂತ್ಯದ ವೇಳೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸುವುದು,ಆಗ ಕೋವಿಡ್ ಸಂಬಂಧಿಸಿದ ಸುರಕ್ಷತಾಕ್ರಮವನ್ನು ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಹಾಗೆಯೇ 80 ವರ್ಷ ಮೇಲ್ಪಟ್ಟವರು,ಕೋವಿಡ್ ಸೋಂಕು ಶಂಕಿತ,ಹೋಂ,ಇನ್ಸ್ಟಿಟ್ಯೂಷನ್ ನಲ್ಲಿರುವ ಮತದಾರರಿಗೆ ಅಂಚೆ ಮೂಲಕ ಮತದಾನದ ಅವಕಾಶ ಕಲ್ಪಿಸಲಾಗಿದೆ.
ನಾಮಪತ್ರಕ್ಕೆ ಇಬ್ಬರು,ಪ್ರಚಾರಕ್ಕೆ ಐವರು:
ಆಯೋಗದ ಹೊಸ ಮಾರ್ಗಸೂಚಿಯನ್ವಯ ಕೋವಿಡ್ ಪೀಡಿತರಿಗೂ ಚುನಾವಣಾ ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ.ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ಅಭ್ಯರ್ಥಿ ಮತ್ತು ಸೂಚಕನಿಗೆ ಮಾತ್ರ ಚುನಾವಣಾಧಿಕಾರಿ ಕೊಠಡಿ ಪ್ರವೇಶಕ್ಕೆ ಅವಕಾಶವಿದ್ದು,ಮನೆ,ಮನೆ ಪ್ರಚಾರದ ವೇಳೆ ಅಭ್ಯಥಿ ಸಹಿತ ಐವರು ಮಾತ್ರ ತೆರಳಬೇಕು ಎಂದು ಆಯೋಗ ಸೂಚಿಸಿದೆ. 57 ಪಂಚಾಯತ್ ಗೆ ಚುನಾವಣೆ:
ಬಂಟ್ವಾಳ ತಾಲೂಕಿನಲ್ಲಿ ಒಟ್ಟು 58 ಗ್ರಾಪಂಗಳಿದ್ದು,ಈ ಪೈಕಿ ಪುದು ಗ್ರಾಪಂ ಹೊರತು ಪಡಿಸಿ 57 ಗ್ರಾಪಂ ಗಳಿಗೆ ಮಾತ್ರ ಚುನಾವಣೆ ನಡೆಯಲಿದೆ.ಪುದು ಪಂಚಾಯತ್ ನ ಚುನಾಯಿತ ಪ್ರತಿನಿಧಿಗಳ ಅವಧಿ ಇನ್ನು ಕೂಡ ಮುಗಿಯದಿರುವ ಹಿನ್ನಲೆಯಲ್ಲಿ ಚುನಾವಣೆ ನಡೆಯುತ್ತಿಲ್ಲ, ಉಳಿದಂತೆ 57 ಗ್ರಾಪಂಗಳಿಗೆ ಚುನಾವಣೆ ನಡೆಯಲಿದ್ದು, ಬಂಟ್ವಾಳ ತಾಲೂಕಾಡಳಿತದ ಚುನಾವಣಾ ಶಾಖಾ ವಿಭಾಗ ಈ ನಿಟ್ಟಿನಲ್ಲಿ ತಯಾರಿಯಲ್ಲಿ ನಿರತವಾಗಿದೆ.ಚುನಾವಣೆಗೆ ಸಂಬಂಧಿಸಿ ಯಾವುದೇ ಮಾಹಿತಿ ಬೇಕಾದಲ್ಲಿ ಬಂಟ್ವಾಳ ಚುನಾವಣಾಧಿಕಾರಿಯವರ ದೂರವಾಣಿ ಸಂಖ್ಯೆ08255-232500 ನ್ನು ಸಂಪರ್ಕಿಸಬುಹುದಾಗಿದೆ ಎಂದು ಬಂಟ್ವಾಳ ಚುನಾವಣಾ ಶಾಖೆಯ ಡಿ.ಟಿ. ರಾಜೇಶ್ ತಿಳಿಸಿದ್ದಾರೆ.ಗ್ರಾ.ಪಂ. ಸದಸ್ಯರ ಆಯ್ಕೆಗಾಗಿ ಈಗಾಗಲೇ ಮೀಸಲಾತಿ ಕೂಡ ಪ್ರಕಟವಾಗಿದ್ದು,ಕೆಲ ಪಂಚಾಯತ್ ಗಳಲ್ಲಿ ನಿಕಟಪೂರ್ವ ಸದಸ್ಯರು ಮತ್ತೆ ಸ್ಪರ್ಧೆಗಿಳಿಯಲು ಸಿದ್ದತೆ ಮಾಡಿಕೊಳ್ಳುತ್ತಿದ್ದರೆ.ಕೆಲವರು ತಮ್ಮ ಮೀಸಲಾತಿಗನುಸಾರವಾಗಿ ಪಕ್ಕದ ವಾಡ್೯ಗೆ ಜಂಪ್ ಆಗಲು ಪ್ರಯತ್ನಿಸುತ್ತಿದ್ದಾರೆ.
3 ಕ್ಷೇತ್ರ ವ್ಯಾಪ್ತಿ :
ಒಟ್ಟು 58 ಗ್ರಾ.ಪಂ.ನ್ನು ಹೊಂದಿರುವ ಬಂಟ್ವಾಳ ತಾಲೂಕು ಮಂಗಳೂರು,ಪುತ್ತೂರು,ಬಂಟ್ವಾಳ ವಿಧಾನಸಭಾ ಕ್ಷೇತ್ರವನ್ನೊಳಗೊಂಡಿದೆ, ಇದರಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ 39 ,ಪುತ್ತೂರು 9 ಹಾಗೂ ಮಂಗಳೂರು 10 ಗ್ರಾಪಂಗಳು ಸೇರಿದೆ. ಪ್ರಸ್ತುತ 2,73,599 ಮತದಾರರನ್ನು ಹೊಂದಿದೆ.ಇದರಲ್ಲಿ 1,35,182 ಗಂಡಸರು,1,38,406 ಮಹಿಳಾ ಮತದಾರರಿದ್ದಾರೆ.ಹಾಗೆಯೇ ಇತರೆ ಐವರು ಮತದಾರರು ಕೂಡ ಇದ್ದಾರೆ. ಚುನಾವಣಾ ದಿನಾಂಕ ಪ್ರಕಟವಾಗುವ ವರೆಗೂ ಹೊಸ ಮತದಾರರ ಸೇರ್ಪಡೆಗೆ ಅವಕಾಶವಿರುವುದರಿಂದ ಆಗ ಮತದಾರರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.ಸದ್ಯ ತಾಲೂಕಿನಲ್ಲಿ 307 ಮತಗಟ್ಟೆಯನ್ನು ಹೊಂದಿದ್ದು,ಇದೀಗ 1500 ಮತದಾರರಿರುವ ಮತಗಟ್ಟೆಯನ್ನು ಆಯೋಗ 1000 ಮತದಾರರಿಗೆ ಸೀಮಿತಗೊಳಿಸಿರುವ ಹಿನ್ನಲೆಯಲ್ಲಿ ಮತಗಟ್ಟೆಯ ಸಂಖ್ಯೆಯು ಹೆಚ್ಚಾಗಬಹುದು.
