ಬಂಟ್ವಾಳ: ಕಳೆದ ತಿಂಗಳು ಸಜೀಪಮುನ್ನೂರುಗ್ರಾಮದ ಅಲಾಡಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯಾ ಪ್ರಕರಣದ ಆರೋಪಿಯೋರ್ವನಿಗೆ ಇನ್ನೊಂದು ಬೈಕ್ ಡಿಕ್ಕಿಯಾದ ಘಟನೆ ಇದೀಗ ಕೊಲೆಯತ್ನ ಪ್ರಕರಣವಾಗಿ ತಿರುವು ಪಡೆದುಕೊಂಡಿದ್ದು, ಈ ಸಂಬಂಧವಾಗಿ ಬಂಟ್ವಾಳ ನಗರ ಠಾಣೆಯ ಪೊಲೀಸರು ಗುರುವಾರ ಮೂವರನ್ನು ಬಂಧಿಸಿದ್ದಾರೆ. ಯತಿನ್ ಕಲ್ಲಡ್ಕ,ರಾಜ ಕುಂಪನಮಜಲು,ಮನೀಶ್ ಕೋಡಿಕೆರೆ ಬಂಧಿತ ಆರೋಪಿಗಳು.
ಇವರಿಂದ ಕೃತ್ಯಕ್ಕೆ ಬಳಸಿದ್ದ ತಲಾ ಒಂದು ಕಾರು,ಬೈಕ್ ಹಾಗೂ ತಲವಾರನ್ನು ವಶಪಡಿಸಿದ್ದಾರೆ. ಆ.7 ರಂದು ಮಧ್ಯಾಹ್ನದ ಹೊತ್ತಿಗೆ . ಶರತ್ ಮಡಿವಾಳ ಹತ್ಯಾ ಪ್ರಕರಣದ ಆರೋಪಿಯಲ್ಲೊಬ್ಬನಾದ ಸಜಿಪ ನಿವಾಸಿ ಶರೀಫ್ ಎಂಬಾತ ಸಂಚರಿಸುತ್ತಿದ್ದ ಬೈಕ್ ಗೆ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ಘಟನೆ ನಡೆದಿತ್ತು,ಇದೇ ವೇಳೆ ಇದಕ್ಕೆ ಪ್ರತಿಯಾಗಿ ಬೈಕ್ ನಲ್ಲಿ ತೆರಳುತ್ತಿದ್ದ ಅಲಾಡಿಯ ನವೀನ್ ಎಂಬವರ ಮೇಲೆ ಶರೀಫ್ ಸಹಚರರು ದಾಳಿ ನಡೆಸಿ ಹಲ್ಲೆಗೈದಿತ್ತು.
ಈ ಎರಡು ಘಟನೆಯ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು,ಪ್ರತಿದೂರು ದಾಖಲಾಗಿತ್ತು. ಪ್ರಕರಣ ತನಿಖೆಯನ್ನು ಕೈಗೆತ್ತಿಕೊಂಡಿದ್ದು, ಇದೀಗ ಅಪಘಾತವೆಂದು ಬಿಂಬಿಸುವ ಮೂಲಕ ಶರೀಫ್ ನ ಕೊಲೆಗೆ ಯತ್ನಿಸಲಾಗಿದೆ ಎಂದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಬಂಟ್ವಾಳ ನಗರ ಪೊಲೀಸರು ತಿಳಿಸಿದ್ದಾರೆ.ಬಂಧಿತ ಆರೋಪಿಗಳು ಈ ಸಂಚು ವಿಫಲವಾದ ಬಳಿಕ ಕಾಟಿಪಳ್ಳದ ದೀಪಕ್ ರಾವ್ ಕೊಲೆಪ್ರಕರಣ ಆರೋಪಿಯೋರ್ವನನ್ನು ಕಿನ್ನಿಗೋಳಿಯ ಉಳ್ಳಂಜೆ ಎಂಬಲ್ಲಿ ಕೊಲೆಗೂ ವಿಫಲ ಯತ್ನ ನಡೆದಿತ್ತು ಎಂಬ ಅಂಶ ತನಿಖೆಯಲ್ಲಿ ಬಯಲಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
