ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಸಮೀಪದ ತಲಪಾಡಿ ಗೋಡಾನ್ವೊಂದಕ್ಕೆ ಕಳ್ಳರು ನುಗ್ಗಿ ರೂ.1.70ಲಕ್ಷ ಮೌಲ್ಯದ ಅಡಿಕೆ ಕಳವು ಮಾಡಿದ ಘಟನೆ ಗುರುವಾರ ತಡರಾತ್ರಿ ನಡೆದಿದೆ.

ಮಂಗಳೂರು ನಿವಾಸಿ, ಅಡಿಕೆ ವ್ಯಾಪಾರಿ ಅನ್ವರ್ ಹುಸೇನ್ ಎಂಬವರಿಗೆ ಸೇರಿದೆನ್ನಲಾದ ತಲಪಾಡಿ ಸಿಟಿ ಕಾಂಪ್ಲೆಕ್ಸ್ನಲ್ಲಿರುವ ಆಲಿಯಾ ಎಂಟರ್ಪ್ರೈಸಸ್ ಅಡಿಕೆ ಗೋಡಾನಿಗೆ ಗುರುವಾರ ಸಂಜೆ ಎಂದಿನಂತೆ ಶಟರ್ ಬಾಗಿಲು ಹಾಕಿ ಸಿಬ್ಬಂದಿಗಳು ಮನೆಗೆ ತೆರಳಿದ್ದರು ಎನ್ನಲಾಗಿದೆ. ಒಟ್ಟು 20 ಮಂದಿ ಮಹಿಳಾ ಸಿಬ್ಬಂದಿಗಳು ಇರುವ ಈ ಗೋಡಾನ್ನಲ್ಲಿ ವಿವಿಧೆಡೆಯಿಂದ ಖರೀದಿಸಿದ ಅಡಿಕೆಯನ್ನು ಗುಣಮಟ್ಟಕ್ಕೆ ತಕ್ಕಂತೆ ಪ್ರತ್ಯೇಕಿಸಿ ಗೋಣಿ ಚೀಲದಲ್ಲಿ ಸಂಗ್ರಹಿಸಿಡಲಾಗುತ್ತಿತ್ತು.
ಶುಕ್ರವಾರ ಬೆಳಿಗ್ಗೆ ಎಂದಿನಂತೆ ಗೋಡಾನ್ ಮೇಲ್ವಿಚಾರಕಿ ಹೇಮಲತಾ ಮತ್ತಿತರರು ಗೋಡಾನ್ ಮುಂಬಾಗಿಲು ತೆರೆದು ಒಳಗೆ ಹೋಗುತ್ತಿದ್ದಂತೆಯೇ ಅಡಿಕೆ ಕಳವು ಇವರ ಗಮನಕ್ಕೆ ಬಂದಿದ್ದು, ತಕ್ಷಣವೇ ಗೋಡಾನ್ ಮಾಲೀಕರು ಮತ್ತು ಬಂಟ್ವಾಳ ನಗರ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಈ ಗೋಡಾನಿನ ಹಿಂಬದಿ ಬಾಗಿಲಿನ ಚಿಲಕವನ್ನು ಕಬ್ಬಿಣದ ಸಲಾಕೆಯಿಂದ ಮುರಿದು ಒಳ ಪ್ರವೇಶಿಸಿದ್ದ ಕಳ್ಳರು ಒಟ್ಟು ರೂ 1.70ಲಕ್ಷ ಮೌಲ್ಯದ ಒಟ್ಟು 12 ಗೋಣಿ ಅಡಿಕೆ ಎಗರಿಸಿ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
