ಬಂಟ್ವಾಳ: ಲಾಕ್ ಡೌನ್ ಹಿನ್ನೆಲೆಯಲ್ಲಿ ಮೂರನೇ ದಿನವಾದ ಶನಿವಾರ ಬಂಟ್ವಾಳ ಮತ್ತು ಬಿ.ಸಿ.ರೋಡ್ ನಗರ ಪ್ರದೇಶದಲ್ಲಿ ಬೆಳಗಿನ ವೇಳೆ ಕಳೆದೆರಡು ದಿನಗಳಿಗಿಂತ ಹೆಚ್ಚು ವಾಹನ, ಜನಸಂಚಾರ ಕಂಡುಬಂತು. ಭಾನುವಾರ ಸಂಪೂರ್ಣ ಲಾಕ್ ಡೌನ್ ಇರುವ ಕಾರಣದಿಂದ ಗ್ರಾಮೀಣ ಭಾಗದ ಜನರು ನಗರಕ್ಕೆ ಬಂದು ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ದಿನಸಿ,ತರಕಾರಿ ಮಾತ್ರವಲ್ಲ ಮಾಂಸದಂಗಡಿಯಲ್ಲು ಜನ ಸರತಿಯಲ್ಲಿ ನಿಂತು ಮಾಂಸ,ಕೋಳಿಮಾಂಸ ಖರೀದಿಸುತ್ತಿರುವುದು ಕಂಡುಬಂತು.
ಬಂಟ್ವಾಳ ನಗರ ಪ್ರದೇಶದಲ್ಲಿ ವಾಹನ ದಟ್ಟಣೆಯು ಹೆಚ್ಚಾಗಿತ್ತು. ಕೆಲಸಗಳಿಗೆ ತೆರಳುವವರು ದ್ವಿಚಕ್ರ ವಾಹನ ಮತ್ತು ಕಾರು, ವ್ಯಾನುಗಳಲ್ಲಿ ಓಡಾಡಿದರು. ಆದರೆ ಸುಮಾರು 11 ಗಂಟೆಯ ಬಳಿಕ ಚಟುವಟಿಕೆ ಕ್ಷೀಣವಾಯಿತು. ಆದರೆ ಬಂಟ್ವಾಳ ಪರಿಸರದಲ್ಲಿ 11 ಗಂಟೆಯ ಬಳಿಕವು ಒಂದಷ್ಟು ಹೊತ್ತು ದ್ವಿಚಕ್ರ ಸಹಿತ ಇತರೆ ವಾಹನಗಳು ಓಡಾಡುತ್ತಿದ್ದವು. ಮಧ್ಯಾಹ್ನದ ಬಳಿಕ ಜನಸಂಚಾರ ವಿಲ್ಲದಿದ್ದರಿಂದ ತೆರೆದಿದ್ದ ಔಷಧ ಅಂಗಡಿಗಳು ಮುಚ್ಚಿದವು. ವಾಹನಗಳ ಓಡಾಟ ಕಡಿಮೆಯಾಗಿ ರಸ್ತೆಯಲ್ಲಿ ಪೊಲೀಸರಷ್ಟೇ ಕಂಡುಬಂದರು.
ಗ್ರಾಮೀಣ ಭಾಗದಲ್ಲಿ ಕೂಡ ಮೂರನೇ ದಿನದ ಬಂದ್ ಯಶಸ್ವಿಯಾಗಿದೆ.ಕಳೆದ ಲಾಕ್ ಡೌನ್ ಗಿಂತ ಭಿನ್ನವಾಗಿ ಈ ಬಾರಿ ಜನರೇ ಸ್ವಯಂಪ್ರೇರಿತರಾಗಿ ಮಧ್ಯಾಹ್ನದ ಬಳಿಕ ರಸ್ತೆಗಿಳಿಯದೆ ಕೊರೊನಾ ವಿರುದ್ಧದ ಸರ್ಕಾರದ ಕ್ರಮಗಳನ್ನು ಅನುಸರಿಸಿದರು.
ಪೊಲೀಸರಿಂದ ಅನ್ಸೌಮೆಂಟ್ :
ಸುಮಾರು 11 ಗಂಟೆಯ ಹೊತ್ತಿಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಸ್ ಐ ಅವಿನಾಶ್ ಅವರು ತಮ್ಮ ಜೀಪಿನ ಧ್ವನಿವರ್ಧಕದ ಮೂಲಕ ಭಾನುವಾರ ಸಂಪೂರ್ಣ ಲಾಕ್ ಡೌನ್ ಬಗ್ಗೆ ಬಂಟ್ವಾಳ,ಬಿ.ಸಿ.ರೋಡ್ ಪರಿಸರದಲ್ಲಿ ಅನ್ಸೌಮೆಂಟ್ ಮೂಲಕ ಸಂದೇಶ ನೀಡಿದರು.ಬೆಳಿಗ್ಗೆಯಿಂದಲೇ ಅಂಗಡಿ ಮುಂಗಟ್ಟು ತೆರೆಯದಂತೆ ಸೂಚನೆಯಿತ್ತರು.
