ಉಡುಪಿ: ಪತಿಯ ಜೊತೆ ಬಂದವಳು ಪರಪುರುಷನೊಂದಿಗೆ ಪರಾರಿಯಾದ ಘಟನೆ ಇಂದು ಉಡುಪಿಯಲ್ಲಿ ಸಂಭವಿಸಿದೆ.
ಘಟನೆಯ ವಿವರ:ಅವರಿಬ್ಬರೂ ಪತಿ-ಪತ್ನಿ, ಎಷ್ಟೋ ವರ್ಷಗಳ ಹಿಂದೆ ಕೊಲ್ಲೂರು ಸಮೀಪದ ಮಾರಣಕಟ್ಟೆ ದೇವಸ್ಥಾನಕ್ಕೆ ಹೋಗಿ ಹರಕೆ ಸಲ್ಲಿಸುವುದಾಗಿ ಹರಕೆ ಹೊತ್ತಿದ್ದರು. ಅದರಂತೆ ಬುಧವಾರ ಸಂಜೆ ಇಬ್ಬರೂ ದೇವಸ್ಥಾನಕ್ಕೆ ಬಂದು ದೇವರ ದರ್ಶನ ಮಾಡಿಕೊಂಡು ಪ್ರದಕ್ಷಿಣೆ ಹಾಕುತ್ತಿದ್ದರು. ಆದರೆ ಅಷ್ಟರಲ್ಲಿ ಪತ್ನಿ ನಾಪತ್ತೆ!! ಗಾಬರಿಗೊಂಡ ಪತಿರಾಯ ಎಲ್ಲಿಯೂ ತನ್ನ ಮನದನ್ನೆಯನ್ನು ಕಾಣದೆ ಕೊನೆಗೆ ಪತ್ನಿಯನ್ನು ಹುಡುಕಿಕೊಡಿ ಎಂದು ಕೊಲ್ಲೂರು ಪೊಲೀಸರ ಮೊರೆಹೋಗಿದ್ದಾನೆ. ಮಾಲೂರು ಗ್ರಾಮದ ರಾಜು ಪೂಜಾರಿ ಎಂಬ ಯುವಕ ತನ್ನ ಪತ್ನಿಯನ್ನು ಕಳೆದುಕೊಂಡವನು.ಸುಧಾ(28) ಕಾಣೆಯಾದಾಕೆ.
ದೇವಸ್ಥಾನಕ್ಕೆ ಬಂದಿದ್ದ ಸುಧಾಳಿಗೆ ದೇವಸ್ಥಾನದಲ್ಲಿ ನಾಗರಾಜ ಎಂಬ ಯುವಕ ಕಾಣಸಿಕ್ಕಿದ್ದು ಆತನನ್ನು ತನ್ನ ಪತಿರಾಯನಿಗೆ ಬಾಲ್ಯದ ಗೆಳೆಯ ಎಂದು ಪರಿಚಯವನ್ನೂ ಮಾಡಿದ್ದಳು. ಹೀಗೆ ಎಲ್ಲರೂ ದೇವಸ್ಥಾನಕ್ಕೆ ಸುತ್ತು ಬರುತ್ತಿದ್ದು, ಈ ವೇಳೆ ರಾಜು ಪೂಜಾರಿ ಸ್ವಲ್ಪ ಮುಂದೆ ಹೋಗಿದ್ದ. ಆತ ಹಿಂತಿರುಗಿ ನೋಡುತ್ತಾನೆ, ಪತ್ನಿ ಸುಧಾ ಮತ್ತು ನಾಗರಾಜ ಇಬ್ಬರೂ ಕಾಣೆಯಾಗಿದ್ದರು. ರಾಜು ತಕ್ಷಣವೇ ದೇವಸ್ಥಾನದ ಹೊರಗೆ ಧಾವಿಸಿ ಬರುವಷ್ಟರಲ್ಲಿ ಸುಧಾ ತನ್ನ ಪ್ರೇಮಿ ನಾಗರಾಜನ ಬೈಕ್ ಹತ್ತಿ ಹೋಗುವುದನ್ನು ಕಂಡಿದ್ದಾನೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

