ಬಂಟ್ವಾಳ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 13,187 ಸ್ವಸಹಾಯ ಸಂಘಗಳಿದ್ದು 1,27,821 ಸದಸ್ಯರನ್ನು ಹೊಂದಿದೆ. ಕಳೆದ ಸಾಲಿನಲ್ಲಿ ರೂ.959 ಕೊಟಿ ವ್ಯವಹಾರ ನಡೆಸಿದ್ದು, ಸದಸ್ಯರು ರೂ.136 ಕೋಟಿ ರೂ. ಉಳಿತಾಯ ಮಾಡಿದ್ದಾರೆ ಎಂದು ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ತಿಳಿಸಿದ್ದಾರೆ. ಬಂಟ್ವಾಳದಲ್ಲಿ ಕಾರ್ಯಾಚರಿಸಲಿರುವ ಯೋಜನೆಯ ನೂತನ ಜಿಲ್ಲಾ ಕಚೇರಿಯಲ್ಲಿ ಶನಿವಾರ ಕರೆದ ಪತ್ರಿಕಾಗೋಷ್ಟಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ೨೦೧೯-೨೦ ರ ಸಾಲಿನ ಸಾಧನಾ ವರದಿಯನ್ನು ಪ್ರಕಟಿಸಿದ ಅವರು, ದ.ಕ. ಜಿಲ್ಲೆಯಲ್ಲಿ ಮುಂದಿನ ವರ್ಷ ರೂ.೭೬೮ ಕೋಟಿ ಸಾಲ ವಿತರಣೆಯ ಗುರಿ ಇರಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಡೆ ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನ ಹಾಗೂ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಹೆಚ್. ಮಂಜುನಾಥ್ ನಿರ್ದೇಶನದೊಂದಿಗೆ ದ.ಕ. ಜಿಲ್ಲೆಯಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದರು.ಕಳೆದ ೩೮ ವರ್ಷಗಳಿಂದ ಯೋಜನೆಯು ಸ್ವ ಸಹಾಯ ಸಂಘಗಳ ಪರಿಕಲ್ಪನೆ, ಸ್ವ ಉದ್ಯೋಗಗಳಿಗೆ ಪ್ರೇರಣೆ, ಬ್ಯಾಂಕಿನ ವ್ಯವಹಾರದ ಬಗ್ಗೆ ಸದಸ್ಯರಿಗೆ ಮಾಹಿತಿ, ರೈತರಿಗೆ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪ್ರಗತಿಬಂಧು ಸಂಘಟನೆಗಳ ಮೂಲಕ ಉತ್ತೇಜನ ನೀಡಲಾಗುತ್ತಿದೆಯಲ್ಲದೆ, ಸಮುದಾಯದ ಅಭಿವೃದ್ಧಿ ಪೂರಕವಾಗಿ ಮೂಲಭೂತ ಸೌಕರ್ಯಗಳ ಒದಗಣೆ ಮತ್ತು ಅನುಷ್ಠಾನದ ಪ್ರೇರಣೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ನಿರಂತರವಾಗಿ ಮಾಡಲಾಗುತ್ತಿದೆ ಎಂದರು.
ಕಳೆದ ವರ್ಷದಲ್ಲಿ ೪೬೧ ಕೃಷಿ ತರಬೇತಿ, ೭೬ ಕೃಷಿ ಅಧ್ಯಯನ ಪ್ರವಾಸಗಳನ್ನೂ ನಡೆಸಲಾಗಿದೆ. ಸಂಪೂರ್ಣ ಸುರಕ್ಷಾ ಕಾರ್ಯಕ್ರಮದಲ್ಲಿ ಒಟ್ಟು ೨೦.೭೪ಕೋ.ರೂ.ಸಂಗ್ರಹಿಸಲಾಗಿದ್ದು, ೧೬.೭೦ ಕೋ.ರೂ. ಕ್ಲೈಮ್ ಗಳನ್ನು ವಿತರಿಸಲಾಗಿದೆ. ಸಮುದಾಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು ೧೧೨ ಕಾಮಗಾರಿಗಳಿಗೆ ೯೧.೩೦ ಲಕ್ಷ ರೂ.ಅನುದಾನ ನೀಡಲಾಗಿದೆ ಎಂದರು.
ಜ.9ರಂದು ನೂತನ ಕಚೇರಿ ಕಾರ್ಯಾರಂಭ: ಬಂಟ್ವಾಳದ ಹಳೇ ಕಚೇರಿ ಪಕ್ಕ ನೂತನವಾಗಿ ನಿರ್ಮಾಣಗೊಂಡಿರುವ ಯೋಜನೆಯ ಜಿಲ್ಲಾ ಕಚೇರಿ ಜು.9 ರಿಂದ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಿಸಲಿದೆ ಎಂದು ಜಿಲ್ಲಾ ಯೋಜನಾ ನಿರ್ದೇಶಕ ಸತೀಶ್ ಶೆಟ್ಟಿ ತಿಳಿಸಿದ್ದಾರೆ.ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ., ಕೇಶವ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
