ಕೈಕಂಬ : ಅಡ್ಡೂರಿಗೆ ಸಮೀಪದ ಕಳಸಗುರಿ ಎಂಬಲ್ಲಿನ ಯುವಕನೊಬ್ಬ ಜೂ. 30ರಂದು ಮೂರ್ಛೆ ಹೋಗಿದ್ದು, ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ ವೇಳೆ ಆತನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ಯುವಕನನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯುವಕನ ಯೋಗಕ್ಷೇಮ ವಿಚಾರಿಸಲು ಮನೆ ಹಾಗೂ ಆಸ್ಪತ್ರೆಗೆ ತೆರಳಿ, ಸೋಂಕಿತನ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದ ಗುರುಪು ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ಯುವಕನಿಗೆ ಚಿಕಿತ್ಸೆ ನೀಡಿದ್ದ ಅಡ್ಡೂರಿನ ಡಾ. ಸಿದ್ದಿಕ್ ಸಹಿತ ಎಂಟು ಮಂದಿ ನಿನ್ನೆಯಿಂದಲೇ ಸ್ವಯಂ ಹೋಂ ಕ್ವಾರಂಟೈನ್ ಆಗಿದ್ದಾರೆ. ಜು. 1ರಂದು ಬೆಳಿಗ್ಗೆ ಅಡ್ಡೂರಿನ ಮನೆಗೆ ತೆರಳಿದ ಪೊಲೀಸ್, ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ತಂಡವು ಯುವಕನ ಮನೆ ಹಾಗೂ ಸುತ್ತಲ 50 ಮೀಟರ್ ಅಂತರದಲ್ಲಿ ಸೀಲ್‍ಡೌನ್ ಪ್ರಕ್ರಿಯೆ ನಡೆಸಿದೆ.
