ಹಸಿರು ಸೀರೆಯುಟ್ಟ ಇವರು ಸುಂದರಿ ಅಜ್ಜಿ ಇವರ ಮುಗ್ಧ ಕಂಗಳಲ್ಲಿ ಹೊಳೆಯುವ ಆನಂದವೇ ಇವರ ಸೌಂದಯ೯ದ ಗುಟ್ಟು. ಈ ಆನಂದಕ್ಕೆ ಕಾರಣ ಇವರ ಜೀವನ ಪ್ರೇಮ. “ಸುಂದರಿ ಅಜ್ಜಿ”.. ನಿಮಗೀಗ ಎಂಭತ್ತಲ್ವ?” ಎಂದರೆ… “ಯಾರು ಹೇಳಿದ್ದು ನಿಮಗೆ? ನಂಗೆ ಈಗ ಅರುವತ್ತು ವಯಸ್ಸು ” ಎನ್ನುತ್ತಾರೆ. ಇವರ ದೇಹಾರೋಗ್ಯ ಹಾಗೂ ಮಾನಸಿಕ ಆರೋಗ್ಯದ ಗುಟ್ಟು ಈ ಪ್ರಕೃತಿ. 
ಹಿರಿಯಡಕದ ಸಾವ೯ಜನಿಕ ಅರಣ್ಯ ಇಲಾಖೆಯಲ್ಲಿ ಕಳೆದ 37 ವಷ೯ಗಳಿಂದ ಕೆಲಸ ಮಾಡುತ್ತಿದ್ದಾರೆ. ಹಾಗಂತ ಇವರದ್ದು ಸರಕಾರಿ ಕೆಲಸವೇನಲ್ಲ. ಬೇರೆ ಬೇರೆ ಹಣ್ಣುಗಳ ಬೀಜಗಳನ್ನು ಬಿತ್ತಿ, ಮೊಳಕೆ ಬಂದು ಸಸಿಯಾಗುವವರೆಗೆ ತನ್ನದೇ ಮಕ್ಕಳಂತೆ ಆರೈಕೆ ಮಾಡಿ ಇಲಾಖೆಯಲ್ಲಿ ಗಿಡ ಬೆಳೆಸುವುದು. ಕೇಳಿಕೊಂಡು ಬಂದವರಿಗೆ ತಾವೇ ಆರಿಸಿ ಕೊಡುತ್ತಾರೆ. ನಾವು ಯಾರೂ ಆ ಗಿಡಗಳನ್ನು ಮುಟ್ಟುವ ಹಾಗಿಲ್ಲ. ತಾನೇ ಆರಿಸಿ, ಹದಿನಾರರ ಹುಡುಗಿಯಂತೆ ಈ ಇಳಿವಯಸ್ಸಲ್ಲಿ ಲಾರಿಗೂ ತಾನೇ ಹತ್ತಿ ತುಂಬಿಸಿ, ಹೆಣ್ಣು ಮಗಳನ್ನು ತವರಿಂದ ಗಂಡನ ಮನೆಗೆ ಕಳುಹಿಸುವ ಹಾಗೆ ತಾವು ಬೆಳೆಸಿದ ಸಸಿ ಕೂಸುಗಳನ್ನು ತುಂಬು ಹೃದಯದಿಂದ ಕಳುಹಿಸಿಕೊಡುತ್ತಾರೆ.
