ಕೈಕಂಬ: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡೂರು ಪಲ್ಲನೆಲ ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಅಹ್ಮದ್ ಬಾವಾ ಎಂಬವರ ಮನೆಯ ಎದುರಿನ ಕಿಟಕಿಯ ಸರಳನ್ನು ಕಿತ್ತು ಒಳನುಗ್ಗಿದ ಕಳ್ಳರು ಮನೆಯೊಳಗಿದ್ದ ಸುಮಾರು 21 ಪವನ್ ಚಿನ್ನಾಭರಣವನ್ನು ಕಳವುಗೈದಿದ್ದಾರೆ.
ಮನೆ ಮಂದಿ ಕುಳವೂರಿನಲ್ಲಿದ್ದ ಮಗನ ಮನೆಗೆ ಹೋಗಿದ್ದರು. ಇಂದು ಬೆಳಗ್ಗೆ ಇಬ್ಬರು ಬಾಲಕರು ಕಾರ್ಯ ನಿಮಿತ್ತ ಮನೆ ಸಮೀಪ ಬಂದಾಗ ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ. ಇವುಗಳ ಒಟ್ಟು ಮೌಲ್ಯ 7ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಜಪೆ ಪೊಲೀಸರು, ಶ್ವಾನದಳ, ಬೆರಳಚ್ಚಯ ತಜ್ಞರು ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
