ವಾಮಂಜೂರು : ಕರೋನಾ ತಡೆಗಾಗಿ ಲಾಕ್ಡೌನ್ ಆದೇಶವಿರುವ ಹೊರತಾಗಿಯೂ ಶನಿವಾರ ಬೆಳಿಗ್ಗೆ ವಾಮಂಜೂರು ರಸ್ತೆ ಬದಿಯಲ್ಲಿ ತರಕಾರಿ, ದಿನಸಿ ಸೊತ್ತು ಖರೀದಿಗಾಗಿ ಗ್ರಾಹಕರು `ಅಂತರ’ ಕಾಯ್ದುಕೊಳ್ಳದೆ ಮುಗಿ ಬಿದ್ದಿದ್ದರು.
ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಗ್ರಾಹಕರಿಗೆ ಎಚ್ಚರಿಕೆ ನೀಡಬೇಕಿದ್ದ ಮಂಗಳೂರು ಗ್ರಾಮಾಂತರ ಪೊಲೀಸರು, ಮಾರುಕಟ್ಟೆಯಿಂದ(ತಾತ್ಕಾಲಿಕ ಸಂತೆ) ಒಂದಷ್ಟು ದೂರದಲ್ಲಿ ಮರದಡಿಯಲ್ಲಿ ವಾಹನ ನಿಲ್ಲಿಸಿ ವೀಕ್ಷಿಸುತ್ತಿದ್ದರು.
ಸಾರ್ವಜನಿಕರು ದೂರಿಕೊಂಡ ಬಳಿಕ ಗ್ರಾಹಕರಿಗೆ ಎಚ್ಚರಿಕೆ ನೀಡಿದ ಪೊಲೀಸರು ಮತ್ತದೇ ಮರದಡಿಗೆ ಹೋಗಿ ವಿಶ್ರಾಂತಿ ಪಡೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂತು. ಬಹುತೇಕ ಎಲ್ಲ ಕಡೆ ಸಾಮಾನ್ಯ ದಿನಗಳಿಗಿಂತ ಹೆಚ್ಚು ವಾಹನಗಳು ರಸ್ತೆಗಳಲ್ಲಿ ಓಡಾಡುತ್ತಿದ್ದರೂ, ಎಲ್ಲೆಡೆ ರಸ್ತೆ ಬದಿಗಳಲ್ಲಿ ತಾತ್ಕಾಲಿಕ ಸಂತೆಗಳು ನಡೆಯುತ್ತಿರುವಾಗ `ಯಾರಿಗೆ ಲಾಕ್ಡೌನ್’ ಎಂಬುದು ಗೊತ್ತಾಗುತ್ತಿಲ್ಲ ಎಂದು ಬಡಪಾಯಿಯೊಬ್ಬರು ವಿಷಾದ ವ್ಯಕ್ತಪಡಿಸಿದರು.
