ಕೈಕಂಬ : ಕೊರೊನಾಕ್ಕೆ ಹಳ್ಳಿ ಜೀವನ ಅಕ್ಷರಶಃ ನಲುಗಿದೆ. ಅಂಗಡಿಗಳು ಮುಚ್ಚಿವೆ, ಪತ್ರಿಕೆಯೂ ಇಲ್ಲ, ಹಾಲು, ತರಕಾರಿಯೂ ಇಲ್ಲದಂತಾಗಿದೆ. ಸರ್ಕಾರದ ಜೀವನಾವಶ್ಯಕ ಸೇವೆಗಳೆಲ್ಲ ಮಂಗಳೂರಿನಂತಹ ನಗರ ಪ್ರದೇಶಗಳಿಗೆ ಮಾತ್ರ ಮೀಸಲಾಗಿದೆ. ಕಳೆದ ಒಂದು ವಾರದಿಂದ ಗುರುಪುರ, ವಾಮಂಜೂರು, ಗಂಜಿಮಠ, ಕೈಕಂಬ, ಅಡ್ಡೂರು, ಪೊಳಲಿ, ಬಡಗಬೆಳ್ಳೂರು , ಅಮ್ಮುಂಜೆ, ಎಡಪದವು, ಕುಪ್ಪೆಪದವು ಮೂಲರಪಟ್ಣದಂತಹ ಸಣ್ಣ ಊರುಗಳಿಗೆ ದಿನವಹಿ ಸರಕು ಸಾಗಾಟ ಮಾಡುತ್ತಿದ್ದ ವಾಹನಗಳು ಸ್ಥಗಿತಗೊಂಡಿವೆ.
ಗುರುಪುರದ ಭಾಗದಲ್ಲಿ ವೈದ್ಯರ ಚಿಕಿತ್ಸಾಲಯವಿದ್ದರೂ, ಈಗ ಒಂದೂ ತೆರೆದಿಲ್ಲ. ಈ ವೈದ್ಯರ ವಿರುದ್ಧ ಯಾರು ಕ್ರಮ ಕೈಗೊಳ್ಳುತ್ತಾರೆ ? ಯಾರ ಲೈಸೆನ್ಸ್ ರದ್ದಾಗಿದೆ ? ರಜೆ ಹಾಕಿ ಮನೆಯಲ್ಲೇ ಕುಳಿತಿರುವ ಇಂತಹ ವೈದ್ಯರಿಗೆ `ಸೆಲ್ಯೂಟ್’ನ ಅಗತ್ಯವಿದೆಯೇ ? ಪರಿಣಾಮ, ಹಳ್ಳಿಗರು ಕಂಗಾಲಾಗಿದ್ದಾರೆ. ಈ ವಿಷಯದಲ್ಲಿ ಜಿಲ್ಲೆಯ ಬಹುತೇಕ ಹಳ್ಳಿಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಮಂಗಳೂರಿಗೆ ಹೋಗಿ ಚಿಕಿತ್ಸೆ ಕೊಡೋಣವೆಂದರೆ ವಾಹನಗಳಿಗೆ ಅವಕಾಶವಿಲ್ಲ. ಆದ್ದರಿಂದ ಜಿಲ್ಲಾಡಳಿತ ತಕ್ಷಣ ಗ್ರಾಮೀಣ ಪ್ರದೇಶಗಳ ಅಗತ್ಯ ಸೇವೆಗಳತ್ತ ಗಂಭೀರ ಗಮನಹರಿಸಬೇಕಿದೆ ಎಂಬುದು ಗ್ರಾಮೀಣರ ಕಳಕಳಿಯಾಗಿದೆ.
