ಕೈಕಂಬ: ಗುರುಪುರ ಕಾರಮೊಗರು ಗುತ್ತುವಿನಲ್ಲಿ ಮೇ 1 ಮತ್ತು 2ರಂದು ನಡೆಯಲಿರುವ ಶ್ರೀ ವೈದ್ಯನಾಥ, ಧೂಮಾವತಿ ಬಂಟ ಪರಿವಾರ ದೈವಗಳ ಧರ್ಮ ನೇಮೋತ್ಸವ ಹಾಗೂ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಭಾನುವಾರ(ಮಾ. 8ರ) ಶ್ರೀ ಕ್ಷೇತ್ರ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದ ಆವರಣದಲ್ಲಿ ನಡೆಯಿತು.
ದೀಪ ಬೆಳಗಿಸಿದ ಗುರುಪುರ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮಿ ಆಶೀರ್ವಚನ ನೀಡುತ್ತ, ಧರ್ಮಕಾರ್ಯಕ್ಕೆ ದೈವ-ದೇವರ ಪ್ರೇರಣೆ ಇರಬೇಕು. ದೈವದ ಪ್ರೇರಣೆಯಂತೆ ಈ ಮಣ್ಣಿನಲ್ಲಿ ಧರ್ಮಕಾರ್ಯ `ಧರ್ಮ ನೇಮೋತ್ಸವ’ ನಡೆಯಲಿದೆ. ಧರ್ಮ ನೇಮಕ್ಕೆ ಸಿದ್ಧತೆ ನಡೆಸುವುದೆಂದರೆ ಕುಟುಂಬ ಸದಸ್ಯರೆಲ್ಲರು ಸಮುದ್ರದಂತೆ ತಮ್ಮ ವ್ಯಕ್ತಿತ್ವ ಬೆಳೆಸಿಕೊಳ್ಳುವುದು. ಅಂದರೆ, ಇಲ್ಲಿ ಎಲ್ಲರೂ ಒಗ್ಗೂಡಿ ಧರ್ಮದ ಕೆಲಸ ನಡೆಯಬೇಕು ಎಂದರು.
ರಾಜೇಶ್ ಭಟ್ ಮುಂಬೈ ಮಾತನಾಡಿ, ಶ್ರೀ ವೈದ್ಯನಾಥನ ಭಯ-ಭಕ್ತಿ ಇರುವವರಿಂದ ಇಲ್ಲಿ ಧರ್ಮದ ಕೆಲಸ ಸಾಧ್ಯವಾಗುತ್ತಿದೆ. ಇದರಲ್ಲಿ ಒಗ್ಗೂಡುವಿಕೆ, ಪ್ರೀತಿಗೆ ಪ್ರಾಧಾನ್ಯತೆ ಇರಬೇಕು ಎಂದರು.
ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಗಡಿಕಾರ ಪ್ರಮೋದ್ ಕುಮಾರ್ ರೈ ಮಾತನಾಡಿ, ಪ್ರೀತಿಯಿಂದ ಎಲ್ಲರ ಮನಸ್ಸು ಗೆಲ್ಲುವುದು ಮನುಷ್ಯ ಧರ್ಮವಾಗುತ್ತದೆ. ಹಾಲಿನಂತಹ ಮನಸ್ಸಿನಿಂದ ದೈವದ ಕೆಲಸ ಮಾಡಿದಾಗ ದೈವದ ಕೃಪೆ ಇರುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕುಟುಂಬದ ಯಜಮಾನ ಸದಾನಂದ ಮಲ್ಲಿ ಎಲ್ಲರೂ ಒಗ್ಗೂಡಿ ಅತ್ಯಂತ ವಿಜೃಂಬಣೆಯಿಂದ ಧರ್ಮ ನೇಮೋತ್ಸವ ಮಾಡೋಣ ಎಂದು ಎಲ್ಲರ ಸಹಕಾರ ಯಾಚಿಸಿದರು.
ಪುರಂದರ ಮಲ್ಲಿ, ಯತಿರಾಜ ಶೆಟ್ಟಿ, ಚಂದ್ರಹಾಸ ಪೂಜಾರಿ ಕೌಡೂರು, ತನಿಯಪ್ಪ ಪೂಜಾರಿ, ರವೀಂದ್ರ ಶೆಟ್ಟಿ, ಸುಬ್ಬಯ ಶೆಟ್ಟಿ, ಸುರೇಶ್ ಕಾಮತ್, ಪ್ರೇಮನಾಥ ಮಾರ್ಲ, ರಮಾನಾಥ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ವಿನಯಕುಮಾರ್ ಶೆಟ್ಟಿ, ಅರ್ಚಕ ಸುಬ್ರಹ್ಮಣ್ಯ ಭಟ್ ಮತ್ತಿತರರು ಉಪಸ್ಥಿತರಿದ್ದರು. ಧರ್ಮ ನೇಮೋತ್ಸವದ ರೂವಾರಿ ಡಾ. ರವಿರಾಜ ಶೆಟ್ಟಿ ಕಾರಮೊಗರುಗುತ್ತು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮ ನಿರೂಪಿಸಿದ ಯಶವಂತ ಕೋಟ್ಯಾನ್ ಮರಂಕರಿಯ ವಂದಿಸಿದರು.
……….
ಧರ್ಮ ನೇಮೋತ್ಸವದಂಗವಾಗಿ ಮೇ. 1ರಂದು ಬೆಳಿಗ್ಗೆ 5 ಗಂಟೆಗೆ ಮೂಳೂರು ಶ್ರೀ ಮುಂಡಿತ್ತಾಯ ದೈವಸ್ಥಾನದಿಂದ ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ಕ್ಷೇತ್ರಕ್ಕೆ ಭಂಡಾರ ಮೆರವಣಿಗೆ ಸಾಗಲಿದೆ. ರಾತ್ರಿ 8ಕ್ಕೆ ಶ್ರೀ ಮೈಸಂದಾಯ, 10ಕ್ಕೆ ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವದ ನೇಮೋತ್ಸವ ನಡೆಯಲಿದೆ. ಮೇ. 2ರಂದು ರಾತ್ರಿ 7ಕ್ಕೆ ಶ್ರೀ ಧೂಮಾವತಿ ಮತ್ತು ಬಂಟ ದೈವದ ನೇಮೋತ್ಸವ, 10:30ಕ್ಕೆ ಸತ್ಯದೇವತೆ, 12ಕ್ಕೆ ಅಣ್ಣಪ್ಪ ಪಂಜುರ್ಲಿ, 2ಕ್ಕೆ ವರ್ತೆ ಪಂಜುರ್ಲಿ ದೈವದ ಕೋಲ ನಡೆಯಲಿದೆ. ಮೇ. ಒಂದರಂದು ಅಪರಾಹ್ನ 2 ಗಂಟೆಗೆ `ಗೀತಾ ಸಾಹಿತ್ಯ ಸಂಭ್ರಮ’ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಎರಡೂ ದಿನ ಮಧ್ಯಾಹ್ನ-ರಾತ್ರಿ ಮಹಾ ಅನ್ನಸಂತರ್ಪಣೆ ನಡೆಯಲಿದೆ.
