ಬಂಟ್ವಾಳ : ಎಲ್ಪಿಜಿ ಗ್ಯಾಸ್, ಇನ್ಶುರೆನ್ಸ್, ವಾಹನಗಳ ಬಿಡಿ ಭಾಗಗಳ ಸಹಿತ ದಿನ ಬಳಕೆ ವಸ್ತುಗಳ ಬೆಲೆ ಏರಿಸುವ ಕೇಂದ್ರ ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಎಸ್.ಡಿ.ಟಿ.ಯು. ನೇತೃತ್ವದ ಸೋಷಿಯಲ್ ಡೆಮಾಕ್ರಟಿಕ್ ಆಟೋ ಚಾಲಕರ ಸಂಘದಿಂದ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಮೂಲಕ ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ಮಂಗಳವಾರ ಮನವಿ ಸಲ್ಲಿಸಲಾಯಿತು.
ನಿರಂತರವಾಗಿ ಎಲ್.ಪಿ.ಜಿ. ಬೆಲೆ ಹಾಗೂ ವಾಹನಗಳ ಬಿಡಿ ಭಾಗಗಳ ಬೆಲೆ ಏರಿಕೆ ಮಾಡುವುದರಿಂದ ಆಟೋ ಚಾಲಕರಿಗೆ ಆರ್ಥಿಕ ಹೊರೆ ಹೆಚ್ಚುತ್ತಿದ್ದು ಬಾಡಿಗೆ ಮೂಲಕ ಸಂಪಾದಿಸಿದ ಹಣವನ್ನು ಅದಕ್ಕಾಗಿಯೇ ವ್ಯಯ ಮಾಡುವ ಪರಿಸ್ಥಿತಿ ಒದಗಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ.ವಾಹನಗಳ ಇನ್ಶುರೆನ್ಸ್ ಮೊತ್ತವನ್ನೂ ಸರಕಾರ ವರ್ಷಕ್ಕೆ ಮಿತಿಗಿಂತಲೂ ಹೆಚ್ಚು ಏರಿಕೆ ಮಾಡುತ್ತಿದ್ದು ಇದರಿಂದ ಇನ್ಶುರೆನ್ಸ್ ಕಟ್ಟುವುದೇ ಅಸಾಧ್ಯವಾಗಿದೆ. ಅಲ್ಲದೆ ದಿನ ಬಳಕೆ ವಸ್ತುಗಳ ಬೆಲೆ ಏರಿಕೆ ಜನ ವಿರೋಧಿ ನೀತಿಯಾಗಿದ್ದು ಇದರಿಂದ ಚಾಲಕ ವೃತ್ತಿ ಮಾಡುವವರಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಆದ್ದರಿಂದ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಈ ಬಗ್ಗೆ ಗಮನ ಹರಿಸಿ ಬೆಲೆ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಖಂಡನೆ: ಎಲ್.ಪಿ.ಜಿ., ಇನ್ಶುರೆನ್ಸ್, ವಾಹನಗಳ ಬಿಡಿ ಭಾಗಗಳು ಹಾಗೂ ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಎಸ್.ಡಿ.ಟಿ.ಯು. ನೇತೃತ್ವದಲ್ಲಿ ಆಟೋ ಚಾಲಕರು ಬಿ.ಸಿ.ರೋಡಿನಲ್ಲಿ ಫೆ.4ರಂದು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಪೊಲೀಸರು ಅವಕಾಶ ನಿರಾಕರಿಸಿರುವುದನ್ನು ಸೋಷಿಯಲ್ ಡೆಮಾಕ್ರಟಿಕ್ ಆಟೋ ಯೂನಿಯನ್ ಖಂಡಿಸಿದೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಆಟೋ ಯೂನಿಯನ್ ಜಿಲ್ಲಾಧ್ಯಕ್ಷ ಖಾದರ್ ಫರಂಗಿಪೇಟೆ, ಎಸ್.ಡಿ.ಟಿ.ಯು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಲಿಕ್ ಕೊಲಕೆ, ಆಟೋ ಯೂನಿಯನ್ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಸಂಶುದ್ದೀನ್ ಪಲ್ಲಮಜಲ್, ಉಪಾಧ್ಯಕ್ಷ ಯಾಕೂಬ್ ಮದ್ದ, ಇಲ್ಯಾಸ್ ವಗ್ಗ, ಸದಸ್ಯರಾದ ಅಝೀಝ್, ಇಬ್ರಾಹೀಂ, ರಶೀದ್ ರಹ್ಮತುಲ್ಲಾ ಸಹಿತ ಮೊದಲಾದವರು ಉಪಸ್ಥಿತರಿದ್ದರು.

