ಬಂಟ್ವಾಳ: ವಿದ್ಯಾರ್ಥಿ ದೆಸೆಯಲ್ಲಿ ಪ್ರತಿಯೊಬ್ಬರು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬೇಕಾಗಿದೆ ಎಂದು ಸುಜೀರ್ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಉಮರ್ ಫಾರೂಕ್ ಹೇಳಿದ್ದಾರೆ.

ಅವರು ಬುಧವಾರ ಸುಜೀರ್ ಸರಕಾರಿ ಪ್ರೌಢಶಾಲಾ ವಾರ್ಷಿಕ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಕ್ರೀಡೆಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯೊಂದಿಗೆ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಸೋಲು, ಗೆಲುವಿನ ಬಗ್ಗೆ ತಡೆಕೆಡಿಸಿಕೊಳ್ಳದೇ ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ಕ್ರೀಡಾ ಮನೋಭಾವವನ್ನು ಬೆಳೆಸಬೇಕಾಗಿದೆ. ನಿರಂತರ ಪರಿಶ್ರಮದಿಂದ ಗುರಿ ಮುಟ್ಟಬಹುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಡಿಯಾ ಪಿಂಟೋ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಜಯವತಿ, ವಿದ್ಯಾಭಿಮಾನಿ ಮಜೀದ್, ಶಾಲಾಭಿವೃದ್ಧಿ ಸದಸ್ಯ ಭಾಸ್ಕರ್ ರೈ, ಝುಬೈರ್, ಟಿ. ಅಬೂಬಕರ್, ಸೆಫಿಯ, ಹರಿಣಾಕ್ಷಿ, ವಸಂತಿ, ನಬೀಸಾ ಹಾಜರಿದ್ದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶಶಿ ಮಂಗಳ ವೈ ಸ್ವಾಗತಿಸಿ, ಪ್ರಸ್ತಾವಿಸಿದರು. ಜಯಪ್ರಕಾಶ್ ವಂದಿಸಿದರು. ಮುಹಮ್ಮದ್ ಬಿ. ಕಾರ್ಯಕ್ರಮ ನಿರೂಪಿಸಿದರು.
