ಲೇಖನ : ರೋಶನಿ ತೃತೀಯ ಬಿಕಾಂ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ
ಉಡುಪಿ: ಚಿತೆ ಸತ್ತವರನ್ನು ಸುಡುತ್ತದೆ ಚಿಂತೆ ಜೀವಂತವಿರುವ ವರನ್ನು ಸುಡುತ್ತದೆ ಅನ್ನುವ ಮಾತಿದೆ.ಇದರ ಅರ್ಥ ಚಿತೆಯಾದರೂ ಆಗಬಹುದು ಆದರೆ ಚಿಂತೆ ಬೇಡ. ಏಕೆಂದರೆ ಚಿತೆ ಸತ್ತವರನ್ನು ಬೇಗ ಸುಟ್ಟು ಬಿಡುತ್ತದೆ ಆದರೆ ಚಿಂತೆ ಬದುಕಿರುವವರನ್ನು ಕ್ಷಣ ಕ್ಷಣಕ್ಕೂ ಸುಟ್ಟು ಬಿಡುತ್ತದೆ . ನಾವು ಬದುಕಿರುವಾಗ ಚಿಂತೆ, ಸತ್ತ ಮೇಲೆ ಚಿಂತೆ, ಮಕ್ಕಳಿದ್ದರೆ ಚಿಂತೆ ,ಮಕ್ಕಳಾಗದಿದ್ದರೆ ಚಿಂತೆ, ಮದುವೆಯಾದರೆ ಚಿಂತೆ, ಮದುವೆಯಾಗದಿದ್ದರೆ ಚಿಂತೆ,ಸಾವು ಬರುವ ಮೊದಲು ಬೇಗ ಸಾಯುವ ಚಿಂತೆ, ಸಾವು ಹತ್ತಿರ ಬಂದಾಗ ಇನ್ನೂ ಬದುಕಬೇಕೆನ್ನುವ ಚಿಂತೆ ,ಹೀಗೆ ನಾನಾ ಚಿಂತೆಗಳು ಸೇರಿ ಕೊನೆಗೆ ಚಿತೆಗೆ ಆಹುತಿಯಾಗುತ್ತಿವೆ .
ಚಿಂತಿಸುವುದು ತಪ್ಪಲ್ಲ ಆದರೆ ಚಿಂತೆ ಮಾಡುವುದರಲ್ಲಿ ಒಂದು ಅರ್ಥವಿರಬೇಕು .ಆ ಚಿಂತೆ ಒಳ್ಳೆಯದಾಗಿರಬೇಕೇ ವಿನಃ ಕೆಟ್ಟದ್ದಾಗಿರಬಾರದು.ಕೆಲವರಿಗೆ ಒಳ್ಳೆಯದನ್ನು ಮಾಡಬೇಕೆನ್ನುವ ಚಿಂತೆ ,ಇನ್ನು ಕೆಲವರಿಗೆ ಕೆಟ್ಟದ್ದನ್ನು ಮಾಡಬೇಕೆನ್ನುವ ಚಿಂತೆ , ಚಿಂತೆ ಇಲ್ಲದ ಮನುಷ್ಯನಿಗೆ ಸಂತೆಯಲ್ಲೂ ಕೂಡ ನಿದ್ದೆ ಎನ್ನುವ ಮಾತನ್ನು ಕೇಳಿದ್ದೇವೆ ಮನುಷ್ಯ ಅಂದ ಮೇಲೆ ಒಂದಲ್ಲ ಒಂದು ರೀತಿಯ ಚಿಂತೆ ಇದ್ದೇ ಇರುತ್ತದೆ .ಕಷ್ಟ ಬಂದಾಗ ಹೇಗೆ ಪರಿಹರಿಸಬೇಕೆಂಬುದು ಚಿಂತೆ ಸುಖ ಬಂದಾಗ ಹೇಗಿರಬೇಕೆನ್ನುವ ಚಿಂತೆ, ಸತ್ತವನಿಗೆ ಮೇಲೆ ಯಾವ ಲೋಕಕ್ಕೆ ಹೋಗಬೇಕೆನ್ನುವ ಚಿಂತೆ ,ಹೀಗೆ ಎಲ್ಲ ಸೇರಿ ಚಿಂತೆಗೆ ಚಿಂತೆಯಾಗಿ ಹೋಗುತ್ತದೆ .ಅದಕ್ಕೆ ಹಿರಿಯರು ಒಂದು ಮಾತನ್ನು ಹೇಳಿರುವುದು ಚಿಂತೆ ಮತ್ತು ಚಿತೆಗೆ ಸೊನ್ನೆ ಅಷ್ಟೇ ವ್ಯತ್ಯಾಸ ಎಂದು .
ಈ ಪ್ರಪಂಚದಲ್ಲಿ ಸಾವಿಲ್ಲದ ಮನೆ ಹೇಗೆ ಇಲ್ಲವೋ ಹಾಗೆಯೇ ಚಿಂತೆ ಇಲ್ಲದ ಮನುಷ್ಯನೂ ಇಲ್ಲ . ಅತಿಯಾದ ಚಿಂತೆಯಿಂದ ಜೀವನ ಜೀವಕ್ಕೂ ಕೂಡ ತೊಂದರೆಯಾಗುತ್ತದೆ .ಯಾಕೆಂದರೆ ಚಿಂತೆ ಚಿತೆಗಿಂತಲೂ ಮೇಲಾದದ್ದು.ಮನುಷ್ಯ ಅಂದ ಮೇಲೆ ನೂರಾರು ಸಮಸ್ಯೆಗಳು ಇದ್ದೇ ಇರುತ್ತದೆ ಆ ಸಮಸ್ಯೆಗೆ ಪರಿಹಾರ ಹುಡುಕಲು ಚಿಂತಿಸುವುದು ಅನಿವಾರ್ಯವಾಗುತ್ತದೆ ಒಂದು ವೇಳೆ ಪರಿಹಾರ ಸಿಗದೇ ಇದ್ದರೇ ಜೀವನವೇ ಒಂದು ಚಿಂತೆಯಾಗಿ ಹೋಗುತ್ತದೆ ,ಹಾಗಾಗಿ ಚಿಂತಿಸುವುದಕ್ಕೂ ಮಿತಿ ಇರಲಿ ಚಿಂತಿಸುವುದರಿಂದ ನಿಮ್ಮ ಜೀವನಕ್ಕೆ ಯಾವುದೇ ತೊಂದರೆ ಆಗದಿರಲಿ ……..ಏನಂತೀರಾ


