ಉಡುಪಿ: ಅನಾರೋಗ್ಯಪೀಡಿತ ತಂದೆಯನ್ನು ಸಾಕಲು ಕಷ್ಟವಾಗುತ್ತದೆ ಎಂದು ಪುತ್ರನೊಬ್ಬ ಅವರನ್ನು ದೂಡಿಹಾಕಿ ಕೊಲೆಗೈದ ಬಳಿಕ ಪ್ರಕರಣ ಮುಚ್ಚಿಹಾಕಲು ಶವವನ್ನು ದಫನ ಮಾಡಿದ ಅಮಾನುಷ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಾರುಕೋಡಿ ಎಂಬಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಿರಾತಕ ಪುತ್ರನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ವಿವರ: ಕನ್ನಾರುಕೋಡಿ ನಿವಾಸಿ ವಾಸು ನಾಯ್ಕ(75)ರಿಗೆ ಇಬ್ಬರು ಮಕ್ಕಳು. ಮಗಳು ಪ್ರಸನ್ನಿ ಮದುವೆಯಾಗಿ ಗಂಡನ ಮನೆಯಲ್ಲಿ ವಾಸವಿದ್ದರೆ, ವಾಸು ನಾಯ್ಕರು ಪುತ್ರ ಪ್ರಕಾಶನ ಜೊತೆಯಲ್ಲಿ ವಾಸವಿದ್ದರು. ವಾಸು ನಾಯ್ಕರಿಗೆ ಕೆಲಸಮಯದ ಹಿಂದೆ ಪಾಶ್ರ್ವವಾಯು ಬಡಿದಿದ್ದು ಅತ್ತಿಂದಿತ್ತ ಓಡಾಡಲು ಆಗುತ್ತಿರಲಿಲ್ಲ. ಪ್ರಕಾಶ ಇದನ್ನೇ ನೆಪವನ್ನಾಗಿಸಿ ಆಗಾಗ ತಂದೆಯ ಜೊತೆ ಜಗಳ ಮಾಡುತ್ತಿದ್ದ. ಕಳೆದ ಸೆಪ್ಟಂಬರ್ 21ರಂದು ರಾತ್ರಿ ಕನ್ನಾರುಕೋಡಿಯ ಮನೆಯಲ್ಲಿ ಮತ್ತೆ ಇಬ್ಬರ ಮಧ್ಯೆ ಜಗಳ ನಡೆದಿದ್ದು, ಕೋಪೋದ್ರಿಕ್ತನಾದ ಪ್ರಕಾಶ ತನ್ನ ತಂದೆಯನ್ನು ಬಲವಾಗಿ ದೂಡಿದ್ದು, ಇದರಿಂದ ಗಂಭೀರ ಗಾಯಗೊಂಡ ವಾಸು ನಾಯ್ಕರು ಸಾವನ್ನಪ್ಪಿದ್ದರು. ಕೊಲೆ ಪ್ರಕರಣ ಬಯಲಾಗುತ್ತದೆ ಎಂದು ಹೆದರಿದ ಪ್ರಕಾಶ ತನ್ನ ತಂದೆಯ ಹೆಣವನ್ನು ಪಕ್ಕದ ಗುಡ್ಡಕ್ಕೆ ಎಳೆದೊಯ್ದು ದಫನಕಾರ್ಯ ನೆರವೇರಿಸಿದ್ದಾನೆ ಎನ್ನಲಾಗಿದೆ. ವಾಸು ನಾಯ್ಕರ ಪುತ್ರಿ ಪ್ರಸನ್ನಿ ಮನೆಗೆ ಹೋದಾಗ ತಂದೆ ಕಾಣದೇ ಇದ್ದು, ವಿಚಾರಿಸಿದಾಗ ಉತ್ತರ ಹೇಳಲು ತಡವರಿಸಿದ್ದು, ಕುಟುಂಬಸ್ಥರು ಪಟ್ಟುಬಿಡದೆ ಕೇಳಿದಾಗ ಸಾವಿನ ಸುದ್ದಿ ಬಹಿರಂಗವಾಗಿದೆ. ಬ್ರಹ್ಮಾವರ ಠಾಣೆಗೆ ಪ್ರಸನ್ನಿ ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿ ಪ್ರಕಾಶನನ್ನು ಬಂಧಿಸಿದ್ದಾರೆ. ಪ್ರಕಾಶ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ

