ಕುಪ್ಪೆಪದವು: ಮಹಿಳೆಯರಿಗಾಗಿ ಸರಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇವುಗಳ ಸದುಪಯೋಗ ಪಡೆದುಕೊಳ್ಳುವಂತೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಮಾಲಿನಿ ಮಹಿಳೆಯರಿಗೆ ಸಲಹೆ ನೀಡಿದ್ದಾರೆ, ಅವರು ಕುಪ್ಪೆಪದವು ಪಂಚಾಯತ್ ನ ರಾಜೀವ ಗಾಂಧಿ ಸಭಾಭವನದಲ್ಲಿ ಮಗಳವಾರ ನಡೆದ ಮಹಿಳಾ ಗ್ರಾಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಹಿಳೆಯರು ಮಕ್ಕಳ ಮೇಲಿನ ದೌರ್ಜನ್ಯ, ಸಮಸ್ಯೆಗಳ ಬಗ್ಗೆ ಬರುವ ದೂರುಗಳನ್ನು ಸ್ವೀಕರಿಸಿ, ಪರಿಹರಿಸಲು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ವನ್ ಸ್ಟಾಪ್ ಸೆಂಟರ್ ಇದ್ದು, ಯಾವುದೇ ಸಂದರ್ಭದಲ್ಲೂ ತಮ್ಮ ಸಮಸ್ಯೆಗಳ ಬಗ್ಗೆ ದೂರು ನೀಡಬಹುದು,ತಮಗಾದ ಅನ್ಯಾಯದ ವಿರುದ್ಧ ದೂರು ನೀಡಲು ಮಹಿಳೆಯರು ಹಿಂಜರಿಯಬಾರದು ಎಂದ ಅವರು ಸಮಾಜ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಗರ್ಭಿಣಿ ಸ್ತ್ರೀಯರಿಗೆ ಅತೀ ಉಪಯುಕ್ತವಾಗಿರುವ ಪಿಎಂಎಂವಿವೈ ಮಾತೃ ವಂದನಾ ಸಪ್ತಾಹ ವನ್ನು ಹಮ್ಮಿಕೊಂಡಿದ್ದು, ಸದ್ರಡ ತಾಯಿ ಸದ್ರಡ ರಾಷ್ಟ್ರ ಎಂಬ ವಿಷಯದ ಮೇಲೆ ಕಾರ್ಯಕ್ರಮಗಳನ್ನು ಆಂದೋಲನವಾಗಿ ಹಮ್ಮಿಕೊಳ್ಳಲಾಗಿದೆ, ಸಪ್ತಾಹದ ಉದ್ಘಾಟನೆಯಿಂದ ಪ್ರಾರಂಭಿಸಿ ಒಂದು ವಾರದಲ್ಲಿ ಪ್ರತೀ ದಿನ ವಿವಿಧ ಕಾರ್ಯಚಟುವಕೆಗಳು ನಡೆಯಲಿದ್ದು, ಚರ್ಚೆಗಳು, ಅರ್ಜಿಗಳ ನೋಂದಾವಣೆ, ವಿಲೇವಾರಿ, ಪಂಚಾಯತ್ ಸದಸ್ಯರೊಂದಿಗೆ ಸಭೆ, ವೈದ್ಯರೊಂದಿಗೆ ಸಮಾಲೋಚನೆ, ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಮಹಿಳೆಯರು ಇದರಲ್ಲಿ ಸಕ್ರೀಯವಾಗಿ ಭಾಗವಹಿಸಿ, ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದರು. ಕುಪ್ಪೆಪದವು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಕಿರಣ್ ಮಹಿಳೆಯರ ಆರೋಗ್ಯ ರಕ್ಷಣೆ ಶುಚಿತ್ವ, ಪೌಷ್ಟಿಕ ಆಹಾರ ಗಳ ಬಗ್ಗೆ ಮಾಹಿತಿ ನೀಡಿದರು, ಪಂ. ಅಧ್ಯಕ್ಷೆ ಶ್ರೀಮತಿ ಲೀಲಾವತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು,ಮಾತೃ ವಂದನಾ ಕಾರ್ಯಕ್ರಮದ ಅರಿವು ಮೂಡಿಸುವ ಕರಪತ್ರಗಳನ್ನು ವಿತರಿಸಲಾಯಿತು, ಪಂಚಾಯತ್ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಸಭೆಯಲ್ಲಿ ಭಾಗವಹಿಸಿದ್ದರು, ಪಿಡಿಓ ಸವಿತಾ ಮಂದೋಲಿಕರ್ ಸಭೆಯನ್ನು ನಡೆಸಿಕೊಟ್ಟರು, ಪಂ. ಸಿಬಂದಿ ಸಹಕರಿಸಿದರು.