ಬಂಟ್ವಾಳ, : ಗ್ರಾಮೀಣ ಭಾಗದ ಪ.ಜಾ. ಹಾಗೂ ಪ.ಪಂ.ಕಾಲನಿಗಳಿಗೆ ಬೀದಿದೀಪ ಸಂಪರ್ಕ ಒಗದಿಸುವಂತೆ ಜಿಪಂ ಸದಸ್ಯ ತುಂಗಪ್ಪ ಬಂಗೇರ ಅವರು ಮನವಿ ಮಾಡಿದರು.
ಮಂಗಳವಾರ ಬಿ.ಸಿ.ರೋಡಿನಲ್ಲಿರುವ ಬಂಟ್ವಾಳ ಮೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಬಂಟ್ವಾಳ ಉಪವಿಭಾಗ ಸಂಖ್ಯೆ ೧ ಮತ್ತು ೨ರ ವ್ಯಾಪ್ತಿಯ ಗ್ರಾಹಕರ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಕೆಲವು ಪ.ಜಾ. ಹಾಗೂ ಪ.ಪಂ. ಕಾಲನಿಗಳಲ್ಲಿ ದಾರಿದೀಪವಿಲ್ಲದೆ ಅಲ್ಲಿನ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಇಲಾಖೆ ಅಥವಾ ಪ.ಜಾ. ಹಾಗೂ ಪ.ಪಂ.ಗೆ ಮೀಸಲಿಟ್ಟ ಅನುದಾನದಲ್ಲಿ ಸಂಪರ್ಕ ಕಲ್ಪಿಸುವಂತೆ ತಿಳಿಸಿದಾಗ, ಈ ಕುರಿತು ಗ್ರಾಪಂಗಳಿಂದ ಮನವಿ ಬಂದಲ್ಲಿ ಸ್ಪಂದಿಸುವುದಾಗಿ ಮೆಸ್ಕಾಂ ಮಂಗಳೂರು ವೃತ್ತದ ಅಧೀಕ್ಷಕ ಎಂಜಿನಿಯರ್ ಮಂಜಪ್ಪ ಅವರು ಭರವಸೆ ನೀಡಿದರು.
3 btl mescom
ರೀಡರ್‌ಗಳಿಗೆ ನೊಟೀಸ್:
ಗ್ರಾಹಕರಿಗೆ ವಿದ್ಯುತ್ ಶುಲ್ಕದ ರೀಡಿಂಗ್ ದಿನಾಂಕದ ಬಳಿಕ ೫-೬ ದಿನ ಕಳೆದು ಬಿಲ್ ನೀಡುತ್ತಾರೆ. ಜೊತೆಗೆ ನಾವು ನಿಗದಿತ ದಿನಾಂಕದೊಳಗೆ ಶುಲ್ಕ ಪಾವತಿಸಿದರೂ, ಮೊದಲೇ ಎಂಟ್ರಿ ಮಾಡಿದ್ದೇವೆ ಎಂಬ ಕಾರಣಕ್ಕೆ ಬಡ್ಡಿಯನ್ನೂ ವಿಧಿಸುತ್ತಾರೆ ಎಂದು ಗ್ರಾಹಕ ಫ್ರಾನ್ಸಿಸ್ ಮೊಂತೊರೊ ಅವರು ಸಭೆಯ ಗಮನ ಸೆಳೆದರು.
ಗ್ರಾಹಕರಿಗೆ ವಿದ್ಯುತ್ ಶುಲ್ಕದ ಬಿಲ್ ನೀಡುವಾಗ ಮೀಟರ್ ರೀಡರ್‌ಗಳು ತಮ್ಮ ಮನಬಂದಂತೆ ನೀಡುವುದಲ್ಲ, ಬದಲಾಗಿ ರೀಡಿಂಗ್‌ಗೆ ದಾಖಲಾದ ದಿನಾಂಕದಂದೇ ಬಿಲ್ಲ್ ನೀಡಬೇಕು. ದಿನಾಂಕವನ್ನು ಕಳೆದು ಬಿಲ್ಲ್ ನೀಡುವ ರೀಡರ್‌ಗಳಿಗೆ ನೊಟೀಸ್ ನೀಡುವಂತೆ ಮೆಸ್ಕಾಂ ಮಂಗಳೂರು ವೃತ್ತದ ಅಧೀಕ್ಷಕ ಎಂಜಿನಿಯರ್ ಮಂಜಪ್ಪ ಅವರು ಆದೇಶಿಸಿದರು.
ಜೊತೆಗೆ ವಿದ್ಯುತ್ ಬಿಲ್‌ಗಳ ಗೊಂದಲದಿಂದ ತೊಂದರೆಯಾಗುತ್ತಿದೆ ಎಂದು ತುಂಗಪ್ಪ ಬಂಗೇರ ಅವರು ತಿಳಿಸಿದಾಗ, ಅದಕ್ಕೆ ಅಧೀಕ್ಷಕ ಎಂಜಿನಿಯರ್ ಉತ್ತರಿಸಿ, ಈ ಕುರಿತು ಕೂಲಂಕುಷ ಅಧ್ಯಯನ ಮಾಡಲು ಸಮಿತಿಯೊಂದನ್ನು ರಚಿಸಿ ವರದಿ ನೀಡಲು, ಆಡಳಿತ ಕಚೇರಿಯಿಂದ ಆದೇಶವಾಗಿದೆ ಎಂದು ತಿಳಿಸಿದರು.
ಜನಸಂಪರ್ಕ ಸಭೆ ಯಾಕಾಗಿ?:
ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಹಿನ್ನೆಲೆಯಲ್ಲಿ ಉಂಟಾಗಿರುವ ವಿದ್ಯುತ್ ಕಡಿತದ ಗೊಂದಲದ ಕುರಿತು ಪುರಸಭಾ ಸದಸ್ಯ ಗೋವಿಂದ ಪ್ರಭು ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜೊತೆಗೆ ಈ ವಿಚಾರವನ್ನು ಮೂರು ತಿಂಗಳ ಹಿಂದೆಯೇ ಜನಸಂಪರ್ಕ ಸಭೆಯ ಗಮನಕ್ಕೆ ತಂದಿದ್ದು, ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಿರುವಾಗ ಜನಸಂಪರ್ಕ ಸಭೆ ಯಾಕಾಗಿ? ಎಂದು ಪ್ರಶ್ನಿಸಿದರು.
ಮಾರ್ನಬಲು ನಿವಾಸಿ ವಿಶ್ವನಾಥ ಆಚಾರ್ಯ ಅವರು ಮಾತನಾಡಿ, ತನ್ನ ಮನೆಯ ಮೇಲ್ಭಾಗದಲ್ಲಿ ವಿದ್ಯುತ್ ತಂತಿಯೊಂದು ಹಾದು ಹೋಗಿ ತೊಂದರೆಯಾಗುತ್ತಿರುವ ಕುರಿತು ಸಂಬಂಧಪಟ್ಟವರ ಗಮನಕ್ಕೆ ತಂದು ಮೂರು ವರ್ಷವಾದರೂ  ಸ್ಪಂದಿಸಿಲ್ಲ ಎಂದು  ಆರೋಪಿಸಿದಾಗ, ಈ ಕುರಿತು ಶಾಖಾಧಿಕಾರಿಯ ಉತ್ತರಕ್ಕೆ ಗರಂ ಆದ, ಅಧೀಕ್ಷಕ ಎಂಜಿನಿಯರ್ ಅವರು ಈ ರೀತಿಯ ತಾತ್ಸಾರ ಸರಿಯಲ್ಲ ಎಂದು ಶಾಖಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಬಾಳ್ತಿಲ ಗ್ರಾಪಂ ವ್ಯಾಪ್ತಿಯಲ್ಲಿ ಇಲ್ಲದೇ ಇರುವ ಪಂಪಿನ ಕನೆಕ್ಷನ್‌ವೊಂದರ ವಿದ್ಯುತ್ ಶುಲ್ಕ ನಮ್ಮ ಗ್ರಾಪಂಗೆ ಬರುತ್ತಿದೆ ಎಂದು ಬಾಳ್ತಿಲ ಗ್ರಾಪಂ ಅಧ್ಯಕ್ಷ ವಿಠಲ ನಾಯ್ಕ್ ಸಭೆಯಲ್ಲಿ ದೂರಿಕೊಂಡಾಗ, ಬರಿಮಾರು ಗ್ರಾಪಂನಲ್ಲಿ ಕೇಳಿದರೆ ಅದು ನಮ್ಮದೂ ಅಲ್ಲ ಎನ್ನುತ್ತಾರೆ. ಹೀಗಾಗಿ ಅದರ ಸಂಪರ್ಕ ಕಡಿತ ಮಾಡುವುದೇ ಪರಿಹಾರ ಎಂದು ಅಧೀಕ್ಷಕ ಎಂಜಿನಿಯರ್ ತಿಳಿಸಿದರು.
ಚೇಳೂರು ಗ್ರಾಪಂದಲ್ಲಿ ಕಾರ್ಯಾಚರಿಸುತ್ತಿರುವ ಫ್ಯಾಕ್ಟರಿವೊಂದಕ್ಕೆ ವಿದ್ಯುತ್ ಸಂಪರ್ಕ ನೀಡದಂತೆ ಗ್ರಾಮಸ್ಥರೊಬ್ಬರು ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರು. ಅಂತಹ ಯಾವುದೇ ಅರ್ಜಿ ಮೆಸ್ಕಾಂಗೆ ಬಂದಿಲ್ಲ. ಗ್ರಾಪಂಅನುಮತಿ ಕೊಡದೇ ಇದ್ದರೆ ಮೆಸ್ಕಾಂ ಕೂಡ ಸಂಪರ್ಕ ನೀಡುವುದಿಲ್ಲ ಎಂದು ಎಂಜಿನಿಯರ್ ತಿಳಿಸಿದರು.
ವೇದಿಕೆಯಲ್ಲಿ ಎರಡು ವಿಭಾಗಗಳ ಸಹಾಯಕ ಅಧಿಕ್ಷಕ ಎಂಜಿನಿಯರ್‌ಗಳಾದ ಪ್ರಶಾಂತ್ ಪೈ, ನಾರಾಯಣ ಭಟ್ ಹಾಜರಿದ್ದರು.

ಬಾಕ್ಸ್—–
ಪೊಲೀಸ್ ದೂರು ನೀಡಿ:
ಒಳಗಡೆಯಿಂದ ಹೊರಗಡೆಗೆ ವಿದ್ಯುತ್ ಮೀಟರ್ ಅಳವಡಿಕೆಗೆಂದು ಹಣ ಕೇಳುತ್ತಿದ್ದು, ಪ್ರತೀ ಮನೆಯಿಂದ ೧೦೦-೨೦೦ ರೂ. ಹಣ ಪಾವತಿ ಮಾಡಿದ್ದಾರೆ ಗ್ರಾಹಕರೊಬ್ಬರು ಸಭೆಯಲ್ಲಿ ದೂರಿಕೊಂಡರು.
ಸಾರ್ವಜನಿಕರಿಂದ ಈ ರೀತಿಯಾಗಿ ಇಲಾಖೆಯು ಹಣ ಸಂಗ್ರಹ ಮಾಡುತ್ತಿಲ್ಲ. ಈ ರೀತಿ ದುಡ್ಡು ಕೇಳಿದರೆ ಇಲಾಖೆಯ ಗಮನಕ್ಕೆ ತನ್ನಿ. ಅವರ ವಿರುದ್ಧ ಪೊಲೀಸ್ ದೂರು ನೀಡಬಹುದು ಎಂದು ಅಧೀಕ್ಷಕ ಎಂಜಿನಿಯರ್ ಸಭೆಗೆ ಸೂಚಿಸಿದರು.

 

By suddi9

Leave a Reply

Your email address will not be published. Required fields are marked *