ಗುರುಪುರ : ಗುರುಪುರ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ನ. 23ರಂದು ನಡೆದ ವಲಯ ರೈತ ಸಂಘದ ಸಭೆಯಲ್ಲಿ ಸ್ಥಳೀಯ ರೈತರು ಅನುಭವಿಸುತ್ತಿರುವ ಗಂಭೀರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ರೈತ ಮುಖಂಡರು, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹೋರಾಟದ ಅಗತ್ಯವಿದೆ ಎಂದು ಹೇಳಿದರು.24vpraythara sabhe

ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದ ರೈತ ಸಂಘ ಹಸಿರು ಸೇನೆಯ ಪೂರ್ಣ ಸಹಕಾರದೊಂದಿಗೆ ನಡೆದ ಸಭೆಯಲ್ಲಿ ಸೇನೆಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಮಾತನಾಡಿ, ಸಂಘ ಬಲಗೊಂಡರೆ ಯಾವುದೇ ಸರ್ಕಾರ ರೈತರ ಬೇಡಿಕೆಗಳಿಗೆ ಮಣಿಯಲೇಬೇಕು. ನಾವೀಗ `ರೈತರ ಸಾಲ ಮನ್ನಾ’ದ ಹೊರತಾಗಿ ಅಧಿಕಾರಿ ಮಟ್ಟದಲ್ಲಿ ರೈತರಿಗಾಗುತ್ತಿರುವ ಮೋಸ, ಅನ್ಯಾಯದ ವಿರುದ್ಧ ಸಂಘಟಿತ ಹೋರಾಟ ನಡೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ರೈತರು ಸಂಘಟಿತರಾಗಬೇಕು. ರೈತರು ಶಾಸಕರ ಬಳಿ ಅಥವಾ ಅಧಿಕಾರಿಗಳ ಬಳಿ ತಮ್ಮ ಮನವಿ ಹಿಡಿದುಕೊಂಡು ಹೋಗುವ ತಾಪತ್ರಯ ನಿಲ್ಲಬೇಕು ಮತ್ತು ಅವರೇ ನಾವಿದ್ದಲ್ಲಿಗೆ ಬರುವಂತೆ ಬಲ ಪ್ರದರ್ಶಿಸಬೇಕು ಎಂದರು.

ಹಸಿರು ಸೇನೆ ಮಂಗಳೂರು ತಾಲೂಕು ಅಧ್ಯಕ್ಷ ದಯಾನಂದ ಶೆಟ್ಟಿ ಕುಪ್ಪೆಪದವು ಮಾತನಾಡಿ, ಗುರುಪುರ ಹೋಬಳಿಯಲ್ಲಿ ಸಾಲ ಮನ್ನಾಕ್ಕೆ ಅರ್ಹತೆ ಪಡೆದಿರುವ 195 ರೈತರಲ್ಲಿ ಈವರೆಗೆ ಕೇವಲ ಐದು ಮಂದಿ ಸಾಲ ಮನ್ನಾ ಫಲಾನುಭವಿಗಳಗಿದ್ದಾರೆ ಎಂಬ ಕಟುಸತ್ಯದ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತ, ಎಸ್‍ಡಿಸಿಸಿ ಬ್ಯಾಂಕ್ ರೈತರಿಗೆ ಗೊತ್ತಿಲ್ಲದೆಯೇ ಖಾತೆ ತೆರೆಯುತ್ತದೆ. ಆದರೆ ಸಾಲ ಮನ್ನಾ ಅಥವಾ ಫಸಲ್ ಬೀಮ ಯೋಜನೆ ವಿಷಯದಲ್ಲಿ ಗುರುಪುರ ಹೋಬಳಿ ರೈತರಿಗೆ ಮಾಹಿತಿ ಇಲ್ಲದಿರುವ ಬೇಸರದ ಸಂಗತಿ ಎಂದರು.

ಕೃಷಿ, ತೋಟಗಾರಿಕೆ ಅಥವಾ ಸಂಬಂಧಿತ ಇತರ ಇಲಾಖೆಗಳಲ್ಲಿ ರೈತರು ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಬೇಕಿದ್ದರೆ ಹಲವು ಕಾರ್ಡುಗಳ ಜೆರಾಕ್ಸ್ ಪ್ರತಿ ಲಗತ್ತಿಸಿ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಿದೆ. ಇದರ ವಿರುದ್ಧ ಹೋರಾಟ ಅಗತ್ಯವಿದ್ದು, ರೈತರ ಯೋಜನೆಗಳಿಗೆ ಒಂದು `ಸ್ಮಾರ್ಟ್ ಕಾರ್ಡ್’ ಅನುಷ್ಠಾನಗೊಳಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದವರು ಹೇಳಿದರು.

ರೈತರಿಗೆ ಸರ್ಕಾರದಿಂದ ಸಿಗುವ ಗೊಬ್ಬರ, ಉಪಕರಣಗಳ ಸಬ್ಸಿಡಿಯಲ್ಲಿ ಸಾಕಷ್ಟು ವಂಚನೆಯಾಗುತ್ತಿದೆ ಮತ್ತು ಗೊಬ್ಬರ ಕಳಪೆ ಗುಣಮಟ್ಟದ್ದಾಗಿರುತ್ತದೆ. ಇದನ್ನು ಬಳಸಿದರೆ ಫಸಲೂ ಬರುವುದಿಲ್ಲ. ಬದಲಾಗಿ ರೈತರಿಗೆ ಚರ್ಮ ರೋಗ ಅಂಟುತ್ತದೆ. ಸರ್ಕಾರಿ ಇಲಾಖೆಗಳ ಅಧಿಕಾರಿ ವರ್ಗಕ್ಕೆ ಲಾಭ ಗಳಿಸಲು ಸೂಕ್ತವೆನ್ನಲಾದ ಕಳಪೆ ಗುಣಮಟ್ಟದ ಮೆಶಿನ್ ಸಬ್ಸಿಡಿಯಡಿ ಮಾರಾಟ ಮಾಡಲಾಗುತ್ತದೆ. ಖಾಸಗಿ ಕಂಪೆನಿಯಲ್ಲಿ ಕಡಿಮೆ ಬೆಲೆಗೆ ಲಭ್ಯವಿರುವ ಮೆಶಿನೊಂದಕ್ಕೆ ಇಲ್ಲಿ ಬೇಡವೆಂದರೂ ಐದಾರು ಸಾವಿರ ರೂ ಹೆಚ್ಚು ಕೊಟ್ಟು ಖರೀದಿಸಬೇಕಾಗುತ್ತದೆ. ರೈತರಿಗೆ ಸರ್ಕಾರದಿಂದ ಜಾರಿಯಾಗುವ ಯೋಜನೆಗಳ ಮಾಹಿತಿ ನೀಡುವಂತಹ ವ್ಯವಸ್ಥೆಯಾಗಬೇಕು. ಈ ನಿಟ್ಟಿನಲ್ಲಿ ಸ್ಥಳೀಯವಾದ ರೈತ ಸಂಘ ಬಲಗೊಳಿಸುವ ಅಗತ್ಯವಿದೆ ಎಂದು ಗುರುಪುರ ವಲಯ ರೈತ ಸಂಘದ ಸಂಚಾಲಕ ಕಿಟ್ಟಣ್ಣ ರೈ ಕಾರಮೊಗರುಗುತ್ತು ಹೇಳಿದರು.

ಹಸಿರು ಸೇನೆಯ ಜಿಲ್ಲಾ ಸಂಚಾಲಕ ಶೇಖ್ ಅಬ್ದುಲ್ ಕಂದಾಯ ಇಲಾಖೆಯಿಂದ ರೈತರಿಗಾಗುತ್ತಿರುವ ಮೋಸ ಹಾಗೂ ಲಂಚಾವತಾರ ಸನ್ನಿವೇಶಗಳ ಎಳೆಎಳೆ ಬಿಚ್ಚಿಟ್ಟರು. ಸಭೆಯಲ್ಲಿ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ಸನತ್ ಕುಮಾರ್ ರೈ ಬೊಂಡಂತಿಲ, ರಾಜೀವ ಶೆಟ್ಟಿ ಸಲ್ಲಾಜೆ, ಎ ಂ ಇಬ್ರಾಹಿಂ, ಜೀವನ್‍ದಾಸ ಶೆಟ್ಟಿ ಮಲ್ಲೂರು ಹಾಗೂ ಗುರುಪುರ ಹೋಬಳಿ ಮಟ್ಟದ ನೂರಾರು ರೈತರು ಪಾಲ್ಗೊಂಡಿದ್ದರು.

ಸಭೆಯಲ್ಲಿ ತೆಗೆದುಕೊಂಡ ನಿರ್ಣಯದ ಪ್ರತಿಯನ್ನು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ನೀಡಲು ಹಾಗೂ ರಾಜ್ಯ ಹಸಿರು ಸೇನೆಯಡಿ ಗುರುಪುರ ವಲಯ ರೈತ ಸಂಘ ಬಲಪಡಿಸಲು ನಿರ್ಧರಿಸಲಾಯಿತು.

By suddi9

Leave a Reply

Your email address will not be published. Required fields are marked *