ಬಂಟ್ವಾಳ: ಶಾಲೆಯ ಸ್ವಾಗತ ಕೊಠಡಿಯ ಶೋಕೇಸ್ ಪೂರ್ತಿ ಪ್ರಶಸ್ತಿಪತ್ರ, ಟ್ರೋಫಿಗಳೇ ತುಂಬಿ ತುಳುಕಿದೆ . ಈ ಪ್ರಶಸ್ತಿಪತ್ರ, ಟ್ರೋಫಿಗಳನ್ನು ಕೇವಲ ಕಬಡ್ಡಿ ಪಂದ್ಯಾಟದಲ್ಲಿ ಬಾಚಿಕೊಂಡಿರುವುದು
ಬಂಟ್ವಾಳ ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆ.. ಕಬಡ್ಡಿ ಪಂದ್ಯದಲ್ಲಿ ಕಳೆದ ನಾಲ್ಕು ವರ್ಷದಿಂದ ರಾಷ್ಟ್ರಮಟ್ಟಕ್ಕೆ ವಿದ್ಯಾರ್ಥಿಗಳನ್ನು ಕೊಡುಗೆಯಾಗಿ ನೀಡುತ್ತಿರುವ ಜಿಲ್ಲೆಯ ಏಕೈಕ ವಸತಿ ಶಾಲೆಯಾಗಿದೆ ಇದುವರೆಗೆ ಶಾಲೆಯ ೧೧ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಇದರಲ್ಲಿ ೭ ಮಂದಿಯ ವಿದ್ಯಾರ್ಥಿನಿಯರಿದ್ದಾರೆ. ೨೦೧೬-೧೭ರಲ್ಲಿ ಮೂರು, ೧೭-೧೮, ೨೦೧೮-೧೯ರಲ್ಲಿ ತಲಾ ಮೂರು ವಿದ್ಯಾರ್ಥಿಗಳು ಮತ್ತು ೧೯-೨೦ ಇಬ್ಬರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಹಂತದಿಂದ ಹಿಡಿದು ವಲಯ, ರಾಜ್ಯ ಹಾಗೂ ರಾಷ್ಟ್ರ ಮಟ್ಟದವರೆಗೂ ಕಬಡ್ಡಿ ಪಂದ್ಯಾಟದಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ವೈಯಕ್ತಿಕ ಚಾಂಪಿಯನ್ ಮುಡಿಗೇರಿಸಿಕೊಂಡಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ೧೭ರ ವಯೋಮಾನದ ಬಾಲಕಿಯರು ದ್ವಿತೀಯ ಸ್ಥಾನ ಪಡೆದು ೫ ಜನ ಬಾಲಕಿಯರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ೧೪ರ ವಯೋಮಾನದ ಬಾಲಕಿಯರು ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟದಲ್ಲಿ ಆಯ್ಕೆಯಾಗಿದ್ದಾರೆ. ವಿಭಾಗ ಮಟ್ಟದಲ್ಲಿ ೧೪ರ ವಯೋಮಾನದ ಬಾಲಕಿಯರಿಗೆ ದ್ವಿತೀಯ ಸ್ಥಾನ ಪಡೆದು ತಂಡದ ಐದು ವಿದ್ಯಾರ್ಥಿನಿಯರು ರಾಜ್ಯ ಮಟ್ಟದಲ್ಲಿ ಆಯ್ಕೆ, ರಾಜ್ಯ ಮಟ್ಟದಲ್ಲಿ ೫ ವಿದ್ಯಾರ್ಥಿನಿಯರು ಮೈಸೂರು ವಿಭಾಗದ ಉಡುಪಿ ತಂಡವು ಪ್ರಥಮ ಸ್ಥಾನವನ್ನು ಪಡೆದಿದ್ದು, ವಗ್ಗ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ಕು. ಅನ್ನಪೂರ್ಣ, ಕು| ಶ್ರಾವ್ಯ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.
ವಿದ್ಯಾರ್ಥಿನಿಯರ ಪರಿಚಯ : ಕು| ಅನ್ನಪೂರ್ಣ ದೈತಪ್ಪ ನಾಗರಾಳ ಇವರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಸುನಗ ಗ್ರಾಮದ ನಾಗರಾಳ ಊರಿನವಳು, ಇಲ್ಲಿನ ದೈತಪ್ಪ ನಾಗರಾಳ ಹಾಗೂ ವಿಜಯಲಕ್ಷ್ಮೀಯವರ ದಂಪತಿಯ ಮೂರನೇ ಪುತ್ರಿ, ವಗ್ಗ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ೮ನೇ ತರಗತಿ ವಿದ್ಯಾರ್ಥಿನಿ. ಹಾಗೆಯೇ ಕು| ಶ್ರಾವ್ಯ ದ.ಕ. ಜಿಲ್ಲೆಯ ಬೆಳ್ತಂಗಡಿ ಮಚ್ಚಿನ ಗ್ರಾಮದ ಬಳ್ಳಮಂಜ ನಿವಾಸಿ, ಇಲ್ಲಿನ ವಾಸು ಕುಲಾಲ್ ಹಾಗೂ ಸುಜಾತ ಕುಲಾಲ್ ದಂಪತಿಯ ಎರಡನೇ ಪುತ್ರಿ.ಈಕೆ ವಗ್ಗ ಮೊರಾರ್ಜಿ ವಸತಿ ಶಾಲೆಯ ೭ನೇ ತರಗತಿ.

ಶಾಲೆಯ ದೈಹಿಕ ಶಿಕ್ಷಕ ಆಸಿದ್ ಪಡಂಗಡಿರವರ ವಿನೂತನ ತರಬೇತಿ ಹಾಗೂ ಪ್ರಯತ್ನದಿಂದ ಈ ಶಾಲೆಯ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದಾರೆ ಎಂಬುದು ವಿದ್ಯಾರ್ಥಿಗಳ ಮನದಾಳದ ಮಾತು.
* ವಿದ್ಯಾರ್ಥಿಗಳ ಶ್ರಮ, ಬದ್ಧತೆ, ಶ್ರೇಷ್ಠ ಕ್ರೀಡಾಳುಗಳಾಗಿ ರೂಪುಗೊಳ್ಳುವಲ್ಲಿ ಸಹಕಾರಿಯಾಗಿದೆ. ದೈಹಿಕ ಶಿಕ್ಷಕರಾದ ಆಸಿದ್ ಪಡಂಗಡಿಯವರ ತರಬೇತಿ, ವಿದ್ಯಾರ್ಥಿಗಳ ಶ್ರಮ ಸಾಧನೆಗೆ ಶ್ರೀ ರಕ್ಷೆಯಾಗಿದೆ. ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ವಿದ್ಯಾರ್ಥಿಗಳಿಗೆ ಅಭಿನಂದನೆ.
– ಸಂತೋಷ್ ಎಸ್. ಸನಿಲ್, ಪ್ರಾಂಶುಪಾಲರು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ವಗ್ಗ
