ಕೋಲಾರ : ಕೋಲಾರ ನಗರಸಭೆ ಚುನಾವಣೆಗೆ ನಗರದ 9ನೇ ವಾರ್ಡಿನಿಂದ (ಪಾಕೀರ ವಾರ್ಡ್) ಜೆಡಿಎಸ್ ಅಭ್ಯರ್ಥಿಯಾಗಿ ಎಸ್.ಕೆ.ಚಂದ್ರಶೇಖರ್ ಚುನಾವಣಾಧಿಕಾರಿ ಸೋಮಶೇಖರ್ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು. ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಭ್ಯರ್ಥಿ ಚಂದ್ರಶೇಖರ್, ಶಾಸಕ ಕೆ.ಶ್ರೀನಿವಾಸಗೌಡರ ಕೈ ಬಲಪಡಿಸಿ ನಗರವನ್ನು ಅಭಿವೃದ್ಧಿಪಡಿಸಲು ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕ ಕೆ.ಶ್ರೀನಿವಾಸಗೌಡ ಅವರು ಅಗಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹಾಕಿ ನಗರದ ಅಭಿವೃದ್ಧಿಗೆ 35 ಕೋಟಿ ರೂ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ ಈಗಿನ ಬಿಜೆಪಿ ಸರ್ಕಾರ ಅದನ್ನು ತಡೆಹಿಡಿದಿದೆ. ಅನುದಾನ ಸರ್ಕಾರದಿಂದ ಮಂಜೂರು ಮಾಡಿಸಲು ಶಾಸಕರಿಗೆ ಬೆಂಬಲ ನೀಡಲಾಗುವುದು ಎಂದರು.

ನಗರದಲ್ಲಿ ಯುಜಿಡಿ, ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪಗಳ ಸಮಸ್ಯೆ ತೀವ್ರವಾಗಿದ್ದು ಪ್ರಮಾಣಿಕವಾಗಿ ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಜೆ.ಡಿ.ಎಸ್ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ನಟರಾಜ್, ಉಪಾಧ್ಯಕ್ಷ ಮೂರಂಡಹಳ್ಳಿ ಗೋಪಾಲಪ್ಪ. ಕೀಲಾರಿಪೇಟೆ ಮುರಳಿ, ಕೆ.ವಿ.ಸುರೇಶ್ಕುಮಾರ್, ಅಮ್ಮವಾರಿ ಪೇಟೆ ಬಾಲಾಜಿ, ಆನಂದ್, ಗೋಪಾಲಪ್ಪ, ಶಂಕರ್ಗುರು ನಾರಾಯಣಸ್ವಾಮಿ, ಬಿ.ಕೃಷ್ಣಪ್ಪ, ಶ್ರೀನಿವಾಸಮೂರ್ತಿ, ರಾಮು, ಬಾಬಜಾನ್ ಇತರರು ಪಾಲ್ಗೊಂಡಿದ್ದರು.
