ಬಂಟ್ವಾಳ; ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ ಬಂಟ್ವಾಳ ತಾ.ನ ಮಾಡಮೆ ಎಂಬಲ್ಲಿ ಶುಕ್ರವಾರ ಟೆಂಪೋ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟರ್ ಸವಾರ ಮೃತಪಟ್ಟರೆ, ಸಹ ಸವಾರೆ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಸೂರಿಕುಮೇರು ನಿವಾಸಿ ಇಬ್ರಾಹಿಂ (47) ಮೃತಪಟ್ಟ ದುರ್ದೈವಿ. ಇವರ ಪುತ್ರಿ ಗಾಯಗೊಂಡು ಮೂಡಬಿದ್ರೆಯ ಆಸ್ಪತ್ರೆಯೊಂದರಲ್ಲಿ ಒಳರೋಗಿಯಾಗಿ ದಾಖಲಿಸಲಾಗಿದೆ.
ಇಬ್ರಾಹಿಂ ಅವರು ಮಗಳ ಜೊತೆ ಕಾರ್ಕಳದ ಬೆಳುವಾಯಿ ಸಂಬಂಧಿಕರ ಮನೆಗೆ ತೆರಳಿ ವಾಪಾಸು ಬರುವ ವೇಳೆ ಮಾಡಮೆ ಎಂಬಲ್ಲಿ ಬಂಟ್ವಾಳ ಕಡೆಯಿಂದ ಬರುತ್ತಿದ್ದ ಟೆಂಪೋ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಇಬ್ರಾಹಿಂ ಹಾಗೂ ಹಿಂಬದಿಯಲ್ಲಿದ್ದ ಮಗಳು ಗಂಭೀರ ಸ್ವರೂಪದ ಗಾಯಗೊಂಡಿದ್ದರು.
ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಮೂಡಬಿದಿರೆಯ ಖಾಸಗಿ ಆಸ್ಪತ್ರೆ ಗೆ ಸಾಗಿಸಿದ್ದು, ಇಬ್ರಾಹಿಂ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ಎಸ್.ಐ.ಸೌಮ್ಯ ಬೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.


