ಕೈಕಂಬ : ಕರ್ಣಾಟಕ ಬ್ಯಾಂಕ್ ವತಿಯಿಂದ ಐದು ಲಕ್ಷ ರೂ ವೆಚ್ಚದಲ್ಲಿ ಪೊಳಲಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಿರ್ಮಿಸಲಾದ ನೂತನ ಕೊಠಡಿಯನ್ನು ಅ. 4ರಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು. ಕರ್ಣಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಬಿ. ಚಂದ್ರಶೇಖರ ರಾವ್ ದೀಪ ಬೆಳಗಿಸಿದರು.
ಪೊಳಲಿ ದೇವಸ್ಥಾನಕ್ಕೆ ಹತ್ತಿರದಲ್ಲಿರುವ ಈ ಶಾಲೆಗೆ ಅಗತ್ಯವಿರುವ ಇನ್ನೂ ನಾಲ್ಕು ಕೊಠಡಿಗಳಿಗೆ ಸರ್ಕಾರದ ವತಿಯಿಂದ 30 ಲಕ್ಷ ರೂ ಅನುದಾನ ತೆಗೆಸಿ ಕೊಡುವುದಾಗಿ ಹೇಳಿದರು. ಜೊತೆಗೆ ಇಲ್ಲಿರುವ ಪೊಳಲಿ ಅನುದಾನಿತ ವಿದ್ಯಾ ವಿಲಾಸ ಪ್ರೈಮರಿ ಶಾಲೆಯ ಅಭಿವೃದ್ಧಿಗೆ ಸರ್ಕಾರದಿಂದ 10 ಲಕ್ಷ ರೂ ಅನುದಾನ ಒದಗಿಸಲಾಗುವುದು ಎಂದು ಶಾಸಕ ನಾಯ್ಕ್ ಹೇಳಿದರು. ಬ್ಯಾಂಕಿನ ಆಡಳಿತ ನಿರ್ದೇಶಕ ಪೊಳಲಿ ಜಯರಾಮ ಭಟ್ ಅವರ ಆಶ್ವಾಸನೆಯಂತೆ ಶಾಲೆಯಲ್ಲಿ ಈಗ ಒಂದು ಕೊಠಡಿ ನಿರ್ಮಾಣಗೊಂಡಿದೆ.
ಅದ್ಯಕ್ಷತೆಯನ್ನು ಕರಿಯಂಗಳ ಗ್ರಾಪಂ ಅಧ್ಯಕ್ಷೆ ಚಂದ್ರಾವತಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯ ಚಂದ್ರಪ್ರಕಾಶ ಶೆಟ್ಟಿ ತುಂಬೆ, ತಾಪಂ ಸದಸ್ಯ ಯಶವಂತ ಪೊಳಲಿ, ಗ್ರಾಪಂ ಸದಸ್ಯ ಲೋಕೇಶ ಭರಣಿ, ಎಸ್ಡಿಎಂಸಿ ಕಾರ್ಯಾಧ್ಯಕ್ಷ ವೆಂಕಟೇಶ ನಾವಡ, ಎಸ್ಡಿಎಂಸಿ ಸದಸ್ಯೆ ಯೋಗಿನಿ ಗುತ್ತಿಗೆಧಾರ ಯಶೋಧರ, ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ರಾಧಾಕೃಷ್ಣ ಭಟ್ ಕೆ ಸ್ವಾಗತಿಸಿ. ಶಿಕ್ಷಕಿ ಜಾನೆಟ್ ಲೋಬೊ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕ ಸಿಪ್ರಿಯನ್ ಡಿ’ಸೋಜ ವಂದನಾರ್ಪಣೆಗೈದರು.
