ಬಂಟ್ವಾಳ ; ಸರಕಾರದ ಆದೇಶವಿದೆ ಎಂಬ ಕಾರಣಕ್ಕೆ ಪುರಸಭೆಯು ಪ್ಲಾಸ್ಟಿಕ್ ಕೈ ಚೀಲಗಳನ್ನು ನಿಷೇಧಿಸುವುದಾದರೆ, ಅದರ ಬದಲಿಗೆ ವ್ಯಾಪಾರಿಗಳು ಪರ್ಯಾಯವಾಗಿ ಯಾವುದನ್ನು ಉಪಯೋಗಿಸಬೇಕು ಎಂಬುದನ್ನು ಕೂಡ ತಿಳಿಸಬೇಕು ಎಂದು ಬಂಟ್ವಾಳ ಪುರಸಭಾ ವ್ಯಾಪ್ತಿಯ ವ್ಯಾಪಾರಿಗಳು ಅಧಿಕಾರಿಗಳನ್ನು ತರಾಟೆಗೂ ತೆಗೆದುಕೊಂಡ ಪ್ರಸಂಗವು ನಡೆಯಿತು.
ಬಂಟ್ವಾಳ ಪುರಸಭೆಯು ಸೋಮವಾರ ಬಿ.ಸಿ.ರೋಡಿನಲ್ಲಿರುವ ಲಯನ್ಸ್ ಭವನದಲ್ಲಿ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಫ್ಲಾಸ್ಟಿಕ್ ನಿಷೇಧದ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಸರಕಾರದ ಆದೇಶವನ್ನು ಜಾರಿಗೆ ತರುವ ಕುರಿತು ಪುರಸಭಾ ಅಧಿಕಾರಿಗಳು ಸಭೆಗೆ ತಿಳಿಸಿದಾಗ, ವರ್ತಕರು ಅಧಿಕಾರಿಗಳ ವಿರುದ್ಧ ಏಕಾಏಕಿ ಆಕ್ರೋಶ ವ್ಯಕ್ತಪಡಿಸಿದರು.
ಫ್ಲಾಸ್ಟಿಕ್ ನೀಡುವ ವ್ಯಾಪಾರಿಗಳಿಗೆ ಬದಲು ಅದನ್ನು ಉಪಯೋಗಿಸುವವರ ವಿರುದ್ಧವೂ ಕ್ರಮಕೈಗೊಳ್ಳಿ ಎಂದು ವ್ಯಾಪಾರಿಗಳು ಸಲಹೆ ನೀಡಿದಾಗ, ಪುರಸಭಾ ಎಂಜಿನಿಯರ್ ಯಾಸ್ಮಿನ್ ಸುಲ್ತಾನ ಅವರು ಇಬ್ಬರ ವಿರುದ್ಧವೂ ಕ್ರಮಕೈಗೊಳ್ಳಲಾಗುವುದು ಎಂದು ಸಮಜಾಯಿಷಿ ನೀಡಿದರು. ನಮ್ಮ ಗ್ರಾಹಕರು ಕೇಳಿದಾಗ ಇಲ್ಲ ಎನ್ನಲು ಆಗುವುದಿಲ್ಲ, ಅವರಲ್ಲಿ ನಿರ್ದಾಕ್ಷಿಣ್ಯವಾಗಿ ಮಾತನಾಡಿದರೆ ನಾವು ವ್ಯಾಪಾರವನ್ನೇ ಕಳೆದುಕೊಳ್ಳಬೇಕಾಗುತ್ತದೆ ವರ್ತಕರು ತಮ್ಮ ಅಳಲನ್ನು ಸಭೆಯ ಮುಂದಿಟ್ಟರು.
ಪುರಸಭಾ ವ್ಯಾಪ್ತಿಯಲ್ಲಿ ಕಸದ ಬುಟ್ಟಿಗಳನ್ನು ತೆಗೆದಿರುವುದರಿಂದ ಪ್ಲಾಸ್ಟಿಕ್ ಸಮಸ್ಯೆ ಸೃಷ್ಟಿಯಾಗಿದೆ. ಹೀಗಾಗಿ ಮತ್ತೆ ಕಸದ ಬುಟ್ಟಿಗಳನ್ನು ಅಳವಡಿಸಿದರೆ ಸಮಸ್ಯೆ ಹತೋಟಿಗೆ ಬರುತ್ತದೆ ಎಂದು ವ್ಯಾಪಾರಿಗಳು ಸಲಹೆ ನೀಡಿದಾಗ, ಪುರಸಭಾ ಕಂದಾಯಾಧಿಕಾರಿ ಶಿವ ನಾಯ್ಕ ಅವರು ಕಸದ ಬುಟ್ಟಿಗಳನ್ನು ಅಳವಡಿಸದಂತೆ ಸರಕಾರದ ಆದೇಶದ ಕುರಿತು ಸ್ಪಷ್ಟಪಡಿಸಿದರು. ಅಸಮರ್ಪಕ ಕಸವಿಲೇವಾರಿ:
ಕಸ ವಿಲೇವಾರಿ ಸಮರ್ಪಕವಾಗಿ ಆಗದೇ ಇರುವ ಕುರಿತು ಕೂಡ ಸಭೆಯಲ್ಲಿ ಆಕ್ರೋಶಗಳು ವ್ಯಕ್ತವಾಯಿತು. ದಂಡ ವಿಧಿಸುವುದಾದರೆ ಎಲ್ಲರ ವಿರುದ್ಧವೂ ವಿಧಿಸಬೇಕು. ಒಂದೆರಡು ವ್ಯಾಪಾರಿಗಳಿಗೆ ಮಾತ್ರ ಅಲ್ಲ,ಎಲ್ಲರಿಗೂ ಅನ್ವಯಿಸಬೇಕು ಎಂದು ಸಲಹೆ ನೀಡಿದರು.
ಪ್ಲಾಸ್ಟಿಕ್ ದುಷ್ಪರಿಣಾಮದ ಕುರಿತು ಪರಿಸರವಾದಿ ಪ್ರೋ. ರಾಜಮಣಿ ರಾಮಕುಂಜ ಅವರು ಮಾತನಾಡಿ, ಪ್ಲಾಸ್ಟಿಕ್ ಬೇಕೋ-ಬೇಡವೋ ಸಂದಿಗ್ದ ಕಾಲಘಟ್ಟವಿದ್ದು, ಅದರ ದುಷ್ಪರಿಣಾಮದ ಕುರಿತು ಎಲ್ಲರೂ ಅರಿತುಕೊಳ್ಳಬೇಕಿದೆ. ಒಮ್ಮೆ ಪ್ಲಾಸ್ಟಿಕ್‌ನ ಅಂಶಗಳನ್ನು ನಮ್ಮ ದೇಹವನ್ನು ಸೇರಿಕೊಂಡರೆ ಮತ್ತೆ ಅದು ಹೊರಗೆ ಹೋಗುವುದಿಲ್ಲ. ಕ್ಯಾನ್ಸರ್ ಖಾಯಿಲೆಗೆ ೭೫ ಶೇ. ಪ್ಲಾಸ್ಟಿಕ್ ಅಂಶಗಳೇ ಕಾರಣವಾಗಿದೆ ಎಂದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀನಿವಾಸ ಮೆಲ್ಕಾರ್, ಡಾ| ವಸಂತ ಬಾಳಿಗಾ, ವರ್ತಕರ ಪ್ರತಿನಿಧಿ ಶ್ರೀನಿವಾಸ ಬಾಳಿಗಾ, ದಾಮೋದರ ಬಿ.ಎಂ., ಪುರಸಭಾ ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ ಉಪಸ್ಥಿತರಿದ್ದರು. ಪುರಸಭೆಯ ಸಿಬಂದಿ ಉಮಾವತಿ ಕಾರ್ಯಕ್ರಮ ನಿರ್ವಹಿಸಿದರು. box.. ಗ್ರಾಹಕರು ೫ ಕೆ.ಜಿ. ಬೆಲ್ಲ ಕೇಳುತ್ತಾರೆ, ನಾವು ಯಾವುದರಲ್ಲಿ ಕಟ್ಟಬೇಕು ನೀವೇ ಹೇಳಿ ಎಂದು ವ್ಯಾಪಾರಿಯೊಬ್ಬರು ಪ್ರಶ್ನಿಸಿದಾಗ ಉತ್ತರಿಸಿದ ಅಧಿಕಾರಿಗಳು ೫೦ ಮೈಕ್ರಾನ್ ಗಿಂತ ಜಾಸ್ತಿಗಿರುವ ಪ್ಲಾಸ್ಟಿಕ್ ಉಪಯೋಗಿಸಬಹುದು ಎಂದರು. ಒಂದು ಕಡೆ ಪ್ಲಾಸ್ಟಿಕ್ ನಿಷೇಧಿಸಿ ಎನ್ನುತ್ತೀರಿ, ಇನ್ನೊಂದು ಕಡೆ ನಿರ್ದಿಷ್ಟ ಅಳತೆಯ ಪ್ಲಾಸ್ಟಿಕ್ ಬಳಸಬಹುದು ಎನ್ನುತ್ತೀರಿ, ಇದರಿಂದ ನಿಷೇದದ ಪರಿಕಲ್ಪನೆ ಹೇಗೆ ಸಾಕಾರಗೊಳ್ಳುತ್ತದೆ ಎಂದು ಪ್ರಶ್ನಿಸಿದ ವ್ಯಾಪಾರಿಗಳು, ಸಾರ್ವಜನಿಕರು ಕೈಚೀಲ ತಂದರೆ ನಾವು ಅದರಲ್ಲೇ ಸಾಮಾಗ್ರಿಗಳನ್ನು ಕಟ್ಟಿಕೊಡುತ್ತೇವೆ. ನಮಗೂ ಪ್ಲಾಸ್ಟಿಕ್ ನಿಷೇಧ ಆಗಬೇಕು ಎಂಬ ಆಸೆ ಇದೆ. ನಾವು ಪ್ಲಾಸ್ಟಿಕ್ ಪರವೇನಲ್ಲ, ಆದರೆ ಎಲ್ಲರಿಗೂ ಒಂದೇ ನೀತಿ ಇರಲಿ ಎಂದರು.

