ಬಂಟ್ವಾಳ: ಪ್ರಸಕ್ತ ವರ್ಷ ನಿರೀಕ್ಷೆಗೂ ಮೀರಿ ಮಳೆಯಾಗಿದ್ದರಿಂದ ಹೆದ್ದಾರಿ ಸಹಿತ ಕೆಲ ಒಳ ರಸ್ತೆಗಳು ಹೊಂಡಗುಂಡಿಗಳಿಂದಾಗಿ ಹದಗೆಟ್ಟು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು,ಈ ರಸ್ತೆಯನ್ನು ಕನಿಷ್ಠ ತೇಪೆಹಾಕಿಯಾದರೂ ಸರಿಪಡಿಸುವಂತೆ ಶುಕ್ರವಾರ ನಡೆದ ಬಂಟ್ವಾಳ ತಾಲೂಕಿನ ಮಾಸಿಕ ಕೆಡಿಪಿ ಪ್ರಗತಿಪರಿಶೀಲನಾ ಸಭೆಯಲ್ಲಿ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳಿಗೆ ಸೂಚಿಸಲಾಯಿತು. ಬಂಟ್ವಾಳ ಪಂಚಾಯತ್ ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಉಪಾಧ್ಯಕ್ಷ ಅಬ್ಬಾಸ್ ಆಲಿ ಅವರು ವಿಷಯ ಪ್ರಸ್ತಾವಿಸಿ ಹೊಂಡಗುಂಡಿಯಿಂದ ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದ್ದು,ಇಂಜಿನಿಯರಿಂಗ್ ವಿಭಾಗದಿಂದ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿದಾಗ ಉತ್ತರಿಸಿದ ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಈ ಕುರಿತು ಸಂಬಂಧಿಸಿದ ಹೆದ್ದಾರಿ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.ಈ ಉತ್ತರದಿಂದ ಅತೃಪ್ತರಾದ ಅಬ್ಬಾಸ್ ಆಲಿ ವಾಹನ ಚಾಲಕರು,ಜನಸಾಮಾನ್ಯರು ಜನಪ್ರತಿನಿಧಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತೇಪೆ ಹಾಕಿಯಾದರೂ ಕನಿಷ್ಠ ಗುಂಡಿಯನ್ನು ಮುಚ್ಚುವಂತೆ ಸೂಚಿಸಿದರು.
ಕೆಲವು ಗ್ರಾಮ ಪಂಚಾಯತ್ ಗಳು ಇನ್ನು ಬಿಲ್ ಪಾವತಿಸದಿರುವದರಿಂದ ಸಮಸ್ಯೆಯಾಗುತ್ತಿದೆ ಎಂದು ಮೆಸ್ಕಾಂ ಅಧಿಕಾರಿ ಅಧ್ಯಕ್ಷರ ಗಮನ ಸೆಳೆದಾಗಗ್ರಾಮ ಪಂಚಾಯತ್ ಗಳಿಗೆ ಮೆಸ್ಕಾಂನಿಂದ ಸಮಯಕ್ಕೆ ಸರಿಯಾಗಿ ಬಿಲ್ಲುಗಳು ತಲುಪುತ್ತಿಲ್ಲ ಎಂಬು ದೂರುಗಳಿವೆ ಈ ಬಗ್ಗೆ ಪರಿಶೀಲಿಸುವಂತೆ ಅಧ್ಯಕ್ಷ ಚಂದ್ರಹಾಸ ಕರ್ಕೇ ರ ಮೆಸ್ಕಾಂ ಅಧಿಕಾರಿಗಳಿಗೆ ಗಮನಹರಿಸಲು ನಿರ್ದೇಶಿಸಿದರು. ತಾಲೂಕಿನಲ್ಲಿ ಇತ್ತೀಚಿಗಿನ ದಿನಗಳಲ್ಲಿ
ಡೆಂಗ್ಯೂಸಹಿತ ಸಾಂಕ್ರಾಮಿಕ ರೋಗಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ದೀಪಾ ಪ್ರಭು ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಭಾಧ್ಯಕ್ಷರ ಕೋರಿಕೆಯಂತೆ ಡಾ.ದೀಪಾ ಪ್ರಭು ಅವರು ಇಲಿ ಜ್ವರದ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದರು.
ವೇದಿಕೆ ಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಸಿ .ಬಂಗೇರ ಉಪಸ್ಥಿತರಿದ್ದರು, ತಾ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಸ್ವಾಗತಿಸಿ,ವಂದಿಸಿದರು.

