ಬಂಟ್ವಾಳ : ಶನಿವಾರ ರಾತ್ರಿ ವಿಧಿವಶರಾದ ಹಿರಿಯ ಸಾಹಿತಿ, ಸಂಘಟಕ,ಜಾನಪದ ವಿದ್ವಾಂಸ, ಸಾಮಾಜಿಕ,ಧಾರ್ಮಿಕ,ಸಹಕಾರಿ ನೇತಾರ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವರ ಪಾರ್ಥಿವ ಶರೀರ ಭಾನುವಾರ ಸಂಜೆ ೪ ಗಂಟೆಗೆ ಪಂಚಭೂತಗಳಲ್ಲಿ ಲೀನವಾಯಿತು. ಏರ್ಯ ಅವರ ಅಪೇಕ್ಷೆಯಂತೆ ಏರ್ಯ ಬೀಡು ಮನೆ ವಠಾರದ ಮಜಲು ಗದ್ದೆಯಲ್ಲಿ ಚಿತೆ ನಿರ್ಮಿಸಿ ಅವರ ಅಳಿಯ ಏರ್ಯ ಬಾಲಕೃಷ್ಣ ಹೆಗ್ಡೆ ಅಗ್ನಿ ಸ್ಪರ್ಶ ಮಾಡುವ ಮೂಲಕ ಅಂತ್ಯಕ್ರಿಯೆ ನಡೆಸಲಾಯಿತು. ಕುಟುಂಬದ ಹಿರಿಯರಾದ ಗೋಪಾಲಕೃಷ್ಣ ರೈ, ಡಾ| ರಾಜಾರಾಮ ಶೆಟ್ಟಿ , ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ ಸಹಿತ ಸಹಸ್ರಾರು ಸಂಖ್ಯೆಯಲ್ಲಿ ಈ ಸಂದರ್ಭದಲ್ಲಿ ಉಪಸ್ಥಿರಿದ್ದರು.
ಮೂಲಮನೆಯಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ:
ಬೆಳಗ್ಗೆ ೯ ಗಂಟೆಗೆ ಆಸ್ಪತ್ರೆಯಿಂದ ಅವರ ಪಾರ್ಥಿವ ಶರೀರವನ್ನು ಏರ್ಯರು ವಾಸ್ತವ್ಯವಿದ್ದ ಮನೆ ಸಾಕೇತಕ್ಕೆ ತಂದು ಅಲ್ಲಿ ಸುಮಾರು ಅರ್ಧಗಂಟೆ ಹೊತ್ತು ಇಟ್ಟು ನಂತರ ಏರ್ಯ ಬೀಡು ಮೂಲ ಮನೆಗೆ ತರಲಾಯಿತು.ಇಲ್ಲಿ ಸ್ನಾನಾದಿ, ಶಾಸ್ತ್ರೀಯ ಕ್ರಮಗಳನ್ನು ಪೂರೈಸಿದ ಬಳಿಕ ಸಾರ್ವಜನಿಕರ ವೀಕ್ಷಣೆಗೆ ಪಾರ್ಥಿವ ಶರೀರವನ್ನು ಇರಿಸಲಾಯಿತು. ವಿವಿಧ ಕ್ಷೇತ್ರದ ಗಣ್ಯರು, ಸಾಹಿತಿಗಳು, ಅವರ ಅಭಿಮಾನಿಗಳು, ಬಂಧು ಮಿತ್ರರು,ಧಾರ್ಮಿಕ. ಸಾಂಸ್ಕೃತಿಕ ಪ್ರಮುಖರು ಏರ್ಯಬೀಡು ಮನೆಗೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಏರ್ಯಲಕ್ಷ್ಮೀನಾರಾಯಣ ಆಳ್ವ ಅವರುಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಒಡನಾಡಿಯಾಗಿರುವ ಹಿನ್ನಲೆಯಲ್ಲಿ ಧರ್ಮಸ್ಥಳದ ಪ್ರತಿನಿಧಿಯಾಗಿ ಡಿ. ಹರ್ಷೇಂದ್ರ ಕುಮಾರ್ ಅವರು ಅಗಮಿಸಿ ಅಂತಿಮ ನಮನ ಸಲ್ಲಿಸಿದರು. 

ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ, ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಮೋಹನ ಆಳ್ವ, ಮಾಜಿ ಶಾಸಕರಾದ ಕೆ.ಪದ್ಮನಾಭ ಕೊಟ್ಟಾರಿ, ಎ. ರುಕ್ಮಯ ಪೂಜಾರಿ, ಜೆ.ಆರ್.ಲೋಬೊ, ಅಮರನಾಥ್ ಶೆಟ್ಟಿ, ಕ್ಯಾ. ಗಣೇಶ್ ಕಾರ್ಣಿಕ್ ಸಹಿತ ಜನ ಪ್ರತಿನಿಧಿಗಳು, ಹಂಪಿ ವಿವಿ ವಿಶ್ರಾಂತ ಕುಲಪತಿ ಡಾ| ವಿವೇಕ ರೈ, ಕಸಾಪ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಯಕ್ಷಗಾನ ವಿದ್ವಾಂಸ ಡಾ| ಪ್ರಭಾಕರ ಜೋಶಿ, ಜಾನಪದ ವಿವಿ ಮಾಜಿ ಕುಲಪತಿ ಡಾ| ಕೆ.ಚಿನ್ನಪ್ಪ ಗೌಡ, ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಆಲಿ,ಬಂಟ್ವಾಳ ತಾ.ಕಸಾಪ ಮಾಜಿ ಅಧ್ಯಕ್ಷ ಬಿ.ತಮ್ಮಯ್ಯ, ಬಸ್ತಿ ವಾಮನ ಶೆಣೈ, ಲೇಖಕ ಸುರೇಂದ್ರ ರಾವ್, ರಾ.ಸ್ವ. ಸಂಘದ ಮಂಗಳೂರು ವಿಭಾಗ ಸಂಘ ಚಾಲಕ ಗೋಪಾಲ ಚೆಟ್ಟಿಯಾರ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶ್ಯಾಮರಾಯ ಆಚಾರ್ಯ, ಪ್ರೊ. ತುಕಾರಾಮ ಪೂಜಾರಿ,ನಿಟ್ಟೆ ವಿವಿ ಕುಲಪತಿ ಎನ್.ವಿನಯ ಹೆಗ್ಡೆ,ಡಾ.ಶಾಂತಾರಾಮ ಶೆಟ್ಟಿ,ಡಾ.ಸತೀಶ್ ಭಂಡಾರಿ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಸದಾನಂದ ಶೆಟ್ಟಿ, ಚಂದ್ರಹಾಸ ಶೆಟ್ಟಿ,ವಕೀಲ ಅಶ್ವಿನಿ ಕುಮಾರ್ ರೈ, ಶೆಡ್ಯೆ ಮಂಜುನಾಥ ಭಂಡಾರಿ. ದೀಪಿಕಾ ಪ್ರೌಢ ಶಾಲೆಯ ನಿವೃತ್ತ ಶಿಕ್ಷಕರಾದ ಮಹಾಬಲೇಶ್ವರ ಹೆಬ್ಬಾರ್, ಎಚ್. ಎನ್. ಹೆಬ್ಬಾರ್, ಸೀತಾರಾಮ್ ಭಟ್, ಬಾಬು ಗೌಡ, ಸಹಿತ ಇತರರು ಅಂತಿಮ ನಮನ ಮಾಡಿದರು. ಸಂತಾಪ: ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ನಿಧನಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ,ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವದಾಸ ಶೆಟ್ಟಿ, ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿ ಅಧ್ಯಕ್ಷ ಪ್ರಕಾಶ್ ಅಂಚನ್, ಜೆಡಿಎಸ್ ಮುಖಂಡ ಪಿ.ಎ.ರಹೀಂ, ಗೇರು ನಿಗಮದ ಮಾಜಿ ಅಧ್ಯಕ್ಷ ಬಿ.ಎಚ್.ಖಾದರ್, ಸಂತಾಪ ವ್ಯಕ್ಯಪಡಿಸಿದ್ದಾರೆ.




