ಬಂಟ್ವಾಳ; ಶ್ರೀ ರಾಮಚಂದ್ರಾಪುರ ಮಠ ಹಾಗೂ ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ಮೇಲಿನ ಆರೋಪಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಮಂಗಳವಾರ ವಿಟ್ಲ, ಕೇಪು ಹಾಗೂ ಕಲ್ಲಡ್ಕ ವಲಯದ ಹವ್ಯಕ ಮಂಡಲದ ವತಿಯಿಂದ ಬಂಟ್ವಾಳ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಶ್ರೀ ರಾಮಚಂದ್ರಾಪುರ ಮಠದ 36 ನೇ ಯತಿವರ್ಯರಾದ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಜಾತಿ ಮತ ಬೇಧವೆಣಿಸದೆ, ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದಿರುತ್ತಾರೆ, ಗೋಸಂಪತ್ತಿನ ಬಗ್ಗೆ ಕಾಳಜಿ ಹೊಂದಿದ್ದು, ವಿವಿಧ ಚಟುವಟಿಕೆಗಳ ಮೂಲಕ ಕಾರ್ಯೋನ್ಮು ಖರಾಗಿದ್ದಾರೆ, ಧರ್ಮ ಜಾಗೃತಿಗಾಗಿ ಶ್ರೀರಾಮಾಯಣ ಮಹಾಸತ್ರ, ವಿಶ್ವಗೋ ಸಮ್ಮೇಳನ ಹಾಗೂ ರಾಮಕಥಾ ಎಂಬ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಮಠಕ್ಕೆ ಸೇರಿದ್ದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನವನ್ನು ಇತ್ತೀಚೆಗೆ ಸರ್ಕಾರ ಮಠಕ್ಕೆ ಹಸ್ತಾಂತರಿಸಿದ್ದು, ಈಗ ದೇವಾಲಯವು ಅಭಿವೃದ್ದಿ ಹೊಂದುತ್ತಿರುವುದರಿಂದ , ಕೆಲ ಪಟ್ಟ ಭದ್ರ ಹಿತಾಸಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಶ್ರೀಗಳ ವಿರುದ್ದ ಸಂಚು ರೂಪಿಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಈ ಸಂಚಿನ ಭಾಗವಾಗಿ ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯಿಂದ ದಾವೆ ಹೂಡಿ ಬ್ಲಾಕ್ ಮೇಲ್ ತಂತ್ರ ಅನುಸರಿಸಿ ಕೋಟ್ಯಾಂತರ ರೂ ಹಣದ ಬೇಡಿಕೆ ಇಟ್ಟಿದ್ದಾರೆ. ಆದರೆ ಪೊಲೀಸರ ಕಾರ್ಯಚರಣೆಯಿಂದ ಆರೋಪಿಗಳ ಬಂಧನವಾಗಿದ್ದು, ಶ್ರೀಗಳ ರಾಮಕಥಾ ಕಾರ್ಯಕ್ರಮದಿಂದ ಗಾಯಕಿ ಪ್ರೇಮಲತಾ ದಿವಾಕರ್ ರವರನ್ನು ಕೈಬಿಟ್ಟ ಕಾರಣಕ್ಕೆ , ಅವರು ಇತರ ಕಲಾವಿದರಿಗೆ ಬೆದರಿಸಿದ್ದು, ಮಠದ ವಿರುದ್ದ ಮಾನಹಾನಿಕರ ಆರೋಪ ಮಾಡುತ್ತಾ ಹಣಕೀಳುವ ಪ್ರಯತ್ನ ನಡೆಸಿದ್ದಾರೆ, ತಮ್ಮ ಕುಕೃತ್ಯಗಳು ಬಯಲಾಗುತ್ತದೆ ಎಂಬ ಭಯದಲ್ಲಿ ಶ್ರೀ ಗಳ ವಿರುದ್ದ ಸುಳ್ಳು ಕೇಸನ್ನು ದಾಖಲಿಸಿದ್ದು, ಮಠಕ್ಕೆ ಸಂಬಂಧವಿಲ್ಲದ ಘಟನೆಗಳನ್ನು ಮಠದ ಮೇಲೆ ಹೇರುಪ್ರಯತ್ನಗಳು ನಡೆದಿದೆ ಎಂದು ಮನವಿಯಲ್ಲಿ ಹೇಳಲಾಗಿದ್ದು, ಸರ್ಕಾರ ಮತ್ತು ಪೊಲೀಸ್ ಇಲಾಖೆ ಈ ಬಗ್ಗೆ ಯಾವುದೇ ಒತ್ತಡಕ್ಕೆ ಮಣಿಯದೆ ಸನಗ್ರವಾದ ತನಿಖೆ ನಡೆಸಿ ಸತ್ಯವನ್ನು ಹೊರತಂದು ಷಡ್ಯಂತ್ರದ ಹಿಂದಿರುವ ವ್ಯಕ್ತಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಹವ್ಯಕ ಮಂಡಲ ಮಂಗಳೂರು ಇದರ ಅಶೋಕ್, ಮೂಲಪ್ರತಿನಿಧಿ ಮುಳ್ಳುಂಜ ವೆಂಕಟೇಶ್ವರ ಭಟ್, ವಿಟ್ಲ ಹವ್ಯಕ ವಲಯಾಧ್ಯಕ್ಷ ಸತೀಶ ಪಂಜಗದ್ದೆ, ಕಾರ್ಯದರ್ಶಿ ಶ್ಯಾಮ ಸುಬ್ರಹ್ಮಣ್ಯ,, ಉಪಾಧ್ಯಕ್ಷ ಕೆ.ಗೋವಿಂದ ಭಟ್, ಕೋಶಾಧಿಕಾರಿ ಮುರಳೀ ಕೃಷ್ಣ ಕುಕ್ಕಿಲ, ಕಲ್ಲಡ್ಕ ಉಮಾಶಿವ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಈಶ್ವರ ಭಟ್,ವಿಟ್ಲ ವಿಭಾಗ ಪ್ರಧಾನ ರಾಮಕೃಷ್ಣ ಭಟ್ ಜಿ, ಕಲ್ಲಡ್ಕ ಹವ್ಯಕ ವಲಯದ ಅಧ್ಯಕ್ಷ ಕುಟ್ಕುಳಿ ಕೃಷ್ಣ ಭಟ್, ಕೇಪು ಹವ್ಯಕ ವಲಯಾಧ್ಯಕ್ಷ ಕೃಷ್ಣ ಮೂರ್ತಿ ಕಟ್ಟೆ, ಉಪಾಧ್ಯಕ್ಷ ಎ.ಮೋಹನ, ಕಾರ್ಯದರ್ಶಿ ಕೆ.ಜಿ.ಗಣೇಶ್, ಗೌರವ ಸಲಹೆಗಾರ ಆಲಂಗಾರು ಈಶ್ವರ ಭಟ್ ಮತ್ತು ಪದಾಧಿಕಾರಿಗಳು, ಗುರಿಕಾರರು ಉಪಸ್ಥಿತರಿದ್ದರು.
