ಸುದ್ದಿ9ಬೆಳ್ತಂಗಡಿ: ಹೆಂಡತಿಯರಿಬ್ಬರ ನಡುವಿನ ವಿರಸ ಅಣ್ಣ-ತಮ್ಮ ಇಬ್ಬರ ಮಧ್ಯೆ ವಿರಸ ತಂದೊಡ್ಡಿ, ಇಬ್ಬರೂ ಪರಸ್ಪರ ಕತ್ತಿ ಬೀಸಿದ ಪರಿಣಾಮ ಒಬ್ಬರು ಮೃತಪಟ್ಟರೆ ಇನ್ನೊಬ್ಬರನ್ನು ಜೀವನ್ಮರಣ ಸ್ಥಿತಿಗೆ ತಂದೊಡ್ಡಿದ ವಿಲಕ್ಷಣ ಘಟನೆ ಪಿಲ್ಯ ಗ್ರಾಮದ ಬರಯ ಎಂಬಲ್ಲಿ ಶುಕ್ರವಾರ ನಡೆದಿದೆ. ಕಡೆಕ್ಕಾರು ಎಂಬಲ್ಲಿನ ಶೇಖರ(43) ಎಂಬುವರೇ ಮೃತಪಟ್ಟವರು. ಆತನ ಅಣ್ಣ ಕೃಷ್ಣಪ್ಪ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ.
ಘಟನೆ ವಿವರ: ಕಷ್ಣಪ್ಪ ಮತ್ತು ಶೇಖರ ಅಣ್ಣ-ತಮ್ಮಂದಿರು. ಇಬ್ಬರೂ ಕೃಷಿಕರಾಗಿದ್ದು ಅಕ್ಕಪಕ್ಕದ ಮನೆಯಲ್ಲಿ ವಾಸಿಸುತ್ತಿದ್ದರು. ತಮ್ಮ ಶೇಖರ 27 ವರ್ಷ ಕಾಲ ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಕೆಲವೊಂದು ಗ್ಯಾಂಗ್ನಲ್ಲಿದ್ದ ಎನ್ನಲಾಗುತ್ತಿದೆ. ಎರಡು ವರ್ಷದ ಹಿಂದೆ ಊರಿಗೆ ಬಂದಿದ್ದ ಈತ ತನ್ನ ಜಾಗದಲ್ಲಿ ಕಷಿ ಮಾಡುತ್ತಿದ್ದ. ಶೇಖರ್ಗೆ ನಾಲ್ಕು ಮದುವೆಯಾಗಿದ್ದು, ಇಬ್ಬರು ಹೆಂಡಿರು ಈತನ ಜೊತೆ ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಇಬ್ಬರಿಗೂ ಇಬ್ಬಿಬ್ಬರು ಮಕ್ಕಳು.
ಶೇಖರ್ ಕೃಷಿ ಜತೆ ಖಾಸಗಿ ಬಸ್ನಲ್ಲಿ ಚಾಲಕನಾಗಿಯೂ ಕೆಲಸ ಮಾಡುತ್ತಿದ್ದ. ಇಬ್ಬರು ಪತ್ನಿಯರ ನಡುವೆ ಮತ್ತು ಗಂಡ-ಹೆಂಡತಿಯರ ನಡುವೆ ಆಗಾಗ ಜಗಳ ನಡೆಯುತ್ತಿದ್ದು ಎಂದು ಹೇಳಲಾಗಿದೆ.
ಬುಧವಾರವೂ ಪತ್ನಿಯರ ನಡುವೆ ಜಗಳ ನಡೆದು ಹೊಡೆದಾಟವೂ ಆಗಿದೆ. ಈ ನಡುವೆ ಒಬ್ಬ ಹೆಂಡತಿ ಮನೆ ಬಿಟ್ಟು ಹೋಗಿದ್ದು, ರಾತ್ರಿ ಕೂಡಾ ಮನೆಗೆ ಬಂದಿರಲಿಲ್ಲ. ಈ ನಡುವೆ, ಗುರುವಾರ ಇನ್ನೊಬ್ಬ ಪತ್ನಿ ನಾಲ್ಕು ಮಕ್ಕಳನ್ನು ಕರೆದುಕೊಂಡು ತನ್ನ ತವರು ಮನೆಗೆ ಹೋಗಿದ್ದಾರೆ. ಈ ನಡುವೆ ಮನೆ ಬಿಟ್ಟು ಹೋದ ಪತ್ನಿ ಗಂಡನ ಮೇಲೆಯೇ ವೇಣೂರು ಪೊಲೀಸರಿಗೆ ದೂರು ನಡಲು ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ.
ಗುರುವಾರ ರಾತ್ರಿ ಮನೆಗೆ ಬಂದ ಶೇಖರ್ ಈ ಘಟನೆಗಳಿಂದ ಕುಪಿತಗೊಂಡಿದ್ದರು. ಪತ್ನಿ ತನ್ನ ಮೇಲೆ ದೂರು ನಡಲು ತನ್ನ ಅಣ್ಣ ಕಷ್ಣಪ್ಪನೇ ಕಾರಣ ಎಂದು ತಿಳಿದು ರಾತ್ರಿ ಸುಮಾರು 3 ಗಂಟೆ ವೇಳೆಗೆ ಆತನ ಮನೆಗೆ ತಲವಾರಿನೊಂದಿಗೆ ತೆರಳಿದ್ದಾನೆ ಎನ್ನಲಾಗಿದೆ. ತಮ್ಮನ ಸ್ವಭಾವದ ಬಗ್ಗೆ ಗೊತ್ತಿದ್ದ ಅಣ್ಣ ಮಲಗುವ ಜಾಗದಲ್ಲಿ ಆತ ಕೂಡಾ ತಲವಾರು ಇಟ್ಟುಕೊಂಡಿದ್ದು, ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದು, ಮನೆಯಲ್ಲಿ ರಕ್ತದೋಕುಳಿ ಹರಿದಿದೆ. ಗಾಯಗೊಂಡ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಶುಕ್ರವಾರ ಸಂಜೆ ತಮ್ಮ ಶೇಖರ ಮತಪಟ್ಟಿದ್ದಾನೆ. ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪ್ರಕರಣ ಇನ್ನಷ್ಟೇ ದಾಖಲಾಗಬೇಕಿದೆ.

