ಮೂಡುಬಿದಿರೆ: ದ.ಕ ಜಿಲ್ಲಾ ಪಂಚಾಯಿತಿ ಸಾಮಾಜಿಕ ಅರಣ್ಯ ವಿಭಾಗ, ಸಾಮಾಜಿಕ ಅರಣ್ಯ ವಲಯ ಮಂಗಳೂರು ಆಶ್ರಯದಲ್ಲಿ ಭಾರತ್ ಸ್ಕೌಟ್ಸ್ ಹಾಗೂ ಗೈಡ್ಸ್‍ನ ಮೂಡುಬಿದಿರೆ ಸಹಯೋಗದೊಂದಿಗೆ ಕಡಲಕೆರೆ ಸಸ್ಯಕ್ಷೇತ್ರದಲ್ಲಿ ಶುಕ್ರವಾರ 2,500 ಬೀಜದುಂಡೆಗಳನ್ನು ತಯಾರಿಸಲಾಯಿತು.

mbd_june7_4
ಮಂಗಳೂರು ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜೆ.ಶ್ರೀನಿವಾಸ್, ಸಹಾಯಕ ಸಂರಕ್ಷಣಾಧಿಕಾರಿ ಶಂಕರೇಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಬೀಜದುಂಡೆ ತಯಾರಿಸುವ ವಿಧಾನ, ಅವುಗಳ ಮಹತ್ವ, ಸಸಿಗಳನ್ನು ನೆಡುವ ಸರಿಯಾದ ವಿಧಾನದ ಬಗ್ಗೆ ಮಾಹಿತಿ ನೀಡಲಾಯಿತು. ಹಲಸು, ಪುನರ್‍ಪುಳಿ, ಜಾರಿಗೆ ಹುಳಿ ನೇರಳೆ, ಮಹಾಗನಿ ಗಿಡಗಳನ್ನು ನೆಡಲಾಯಿತು.
ಸಾಮಾಜಿಕ ಅರಣ್ಯಾಧಿಕಾರಿ ಚಿದಾನಂದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇತರ ಜೀವಿಗಳಂತೆ ಮನುಷ್ಯ ಕೂಡ ಒಂದು ಭಾಗ. ಆದರೆ ಅಭಿವೃದ್ಧಿ ಹೆಸರಿನಲ್ಲಿ ನಾವು ಪ್ರಕೃತಿಯನ್ನು ನಾಶ ಮಾಡುತ್ತಿದ್ದೇವೆ. ಇದು ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತಿದೆ. ಪ್ರಕೃತಿ ಏನೆಲ್ಲಾ ಸಹಿಸಿಕೊಳ್ಳಬೇಕೋ ಅದನ್ನು ಸಹಿಸಿಕೊಂಡಿದೆ. ಪ್ರಕೃತಿ ಮೇಲಿನ ಅತಿಕ್ರಮಣ ಹೆಚ್ಚಾಗುತ್ತಿರುವುದರಿಂದ ಅದು ಸಮತೋಲನ ಕಳೆದುಕೊಳ್ಳುವ ಸ್ಥಿತಿಯಲ್ಲಿದೆ. ಪ್ರಕೃತಿ ಬಗ್ಗೆ ಎಲ್ಲರಲ್ಲಿ ಕಾಳಜಿ ಬರಬೇಕಾಗಿದೆ. ಹಿರಿಯರು ಮಾತ್ರವಲ್ಲ ಎಳೆಯರು ಮರಗಿಡಗಳನ್ನು ನೆಟ್ಟು ಬೆಳೆಸಿದಲ್ಲಿ ಪ್ರಕೃತಿ ಸಂರಕ್ಷಣೆ ಪರಿಣಾಮಕಾರಿಯಾಗುತ್ತದೆ. ಬೀಜದುಂಡೆ ಮಾಡಿ ಸಸ್ಯ ಸಂಪತ್ತನ್ನು ಹೆಚ್ಚಿಸುವುದು ಸರಳವಾದ ವಿಧಾನ ಎಂದರು.
ಮೂಡುಬಿದಿರೆ ರೋಟರಿ ವಿದ್ಯಾಸಂಸ್ಥೆಗಳ ಪ್ರಾಂಶುಪಾಲ, ಸ್ಕೌಟ್ಸ್‍ನ ಹಾಗೂ ಗೈಡ್ಸ್‍ನ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷ ವಿನ್ಸೆಂಟ್ ಡಿ’ಕೋಸ್ತ ಮಾತನಾಡಿ, ಪ್ರಕೃತಿ ಸಂಪತ್ತನ್ನು ಕೊಳ್ಳೆ ಹೊಡೆದ ಪರಿಣಾಮ ನಾವು ಇಂದು ಹವಮಾನ ವೈಪರಿತ್ಯದ ಪ್ರಭಾವಗಳನ್ನು ಅನುಭವಿಸುತ್ತಿದ್ದೇವೆ. ಬೀಜದುಂಡೆಯಂತಹ ಅಭಿಯಾನ ನಮ್ಮಿಂದ ನಿರಂತರವಾಗಿ ನಡೆದರೆ ಪ್ರಕೃತಿ ಸಮೃದ್ಧವಾಗಿ ಉಳಿಯಬಹುದು. ಮಕ್ಕಳಂತೆ ಗಿಡಗಳು. ಅವುಗಳಲ್ಲೂ ಬದಲಾವಣೆಯಾಗುತ್ತದೆ. ಅದಕ್ಕೆ ನೀರೆರೆದು ಪೋಷಿಸಿದರೆ ಅವುಗಳಿಗೆ ಮಾತ್ರವಲ್ಲ, ನಮಗೂ ಒಳ್ಳೆಯದಾಗುತ್ತದೆ ಎಂದರು.
ಉಪವಲಯ ಅರಣ್ಯಾಧಿಕಾರಿ ರೋಹಿಣಿ, ಮಂಜುನಾಥ ಗಾಣಿಗ, ಸ್ಕೌಟ್-ಗೈಡ್ಸ್ ಸಂಸ್ಥೆಯ ಜೊತೆ ಕಾರ್ಯದರ್ಶಿ ನಿರ್ಮಲಾ, ನವೀನ್ ಅಂಬೂರಿ, ಶಿಕ್ಷಕಿಯರಾದ ವಿದ್ಯಾ, ವಿನಯ, ಸುರಕ್ಷಾ, ಸಸ್ಯಕ್ಷೇತ್ರದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸ್ಕೌಟ್-ಗೈಡ್ಸ್‍ನ ಡಿಒಸಿ ಭರತ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *