ಕೈಕಂಬ : ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಸುಮಾರು ಎರಡು ಲಕ್ಷ ವಿದ್ಯಾರ್ಥಿಗಳ ತಲುಪುವ ಗುರಿಯೊಂದಿಗೆ `ಮಧುಮೇಹ ತಡೆಗೆ ನಮ್ಮಯ ನಡಿಗೆ ವಿದ್ಯಾರ್ಥಿಗಳ ಕಡೆಗೆ’ ಆಂದೋಲನದ ಮೂಲಕ ಮಧುಮೇಹ ಜಾಗೃತಿ ಮೂಡಿಸಲಿದೆ ಎಂದು ಫೌಂಡೇಶನ್-ಆಸ್ಪತ್ರೆ ಮುಖ್ಯಸ್ಥ ಡಾ. ಸತೀಶ್ ಶಂಕರ್ ತಿಳಿಸಿದರು. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.ಗಂಜಿಮಠದ ಆಯುರ್‍ಸ್ಪರ್ಶ ಡಯಾಬಿಟಿಕ್ ಇನ್ನೋವೇಟಿವ್ ಫೌಂಡೇಶನ್(ರಿ) ಮತ್ತು ಆಯುರ್‍ಸ್ಪರ್ಶ ಆಯುರ್ವೇದ ಆಸ್ಪತ್ರೆ ಇದರ ಜಂಟಿ ಆಶ್ರಯದಲ್ಲಿ ಈ ಸಂಸ್ಥೆಯು 2016ರ ಜುಲೈ ಮೂರರಿಂದ ಮಧುಮೇಹಮುಕ್ತ ಭಾರತ ಅಭಿಯಾನ ಆರಂಭಿಸಿದ್ದು, ಈವರೆಗೆ ಸುಮಾರು 25ಕ್ಕೂ ಹೆಚ್ಚು ಮಧುಮೇಹ ಜಾಗೃತಿ ಶಿಬಿರ ಆಯೋಜಿಸಿದೆ. ಮಧುಮೇಹದ ಕುರಿತು ಜಾಗೃತಿಗಾಗಿ ಚಿತ್ರಕಲಾ ಸ್ಪರ್ಧೆ, ಉಚಿತ ಮಧುಮೇಹ ತಪಾಸಣಾ ಶಿಬಿರ, ಮಧುಮೇಹ ಕವಿಗೋಷ್ಠಿ, ಮಧುಮೇಹ ಮಾಧ್ಯಮಗೋಷ್ಠಿ, ವಿಚಾರಗೋಷ್ಠಿ ಮೂಲಕ ಕಾಯಿಲೆ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಲಾಗಿದೆ. ಈ ಬಾರಿ ವಿದ್ಯಾರ್ಥಿಗಳ ಮುಖಾಂತರ ಎರಡು ಲಕ್ಷ ಮನೆಗಳಿಗೆ ಮಧುಮೇಹ ಜಾಗೃತಿ ತಲುಪಿಸುವ ಗುರಿ ಹೊಂದಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳಿಗೆ ಮಧುಮೇಹ ಜಾಗೃತಿ ಕುರಿತು ಚಿತ್ರಕಲಾ ಸ್ಪರ್ಧೆ, ಭಾಷಣ ಸ್ಪರ್ಧೆ, ಕಿರು ನಾಟಕ, ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಮೊದಲಿಗೆ ದಕ್ಷಿಣ ಕನ್ನಡ ಜಿಲ್ಲೆಯ 100 ಆಯ್ದ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುವುದು. ಬಳಿಕ ಕರ್ನಟಕದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದರು.
ಮಧುಮೇಹದಲ್ಲಿ ಟೈಪ್ ಒಂದು ಮತ್ತು ಟೈಪ್ ಎರಡು ವಿಧವಿದೆ. ಟೈಪ್ ಎರಡು ಮಧುಮೇಹ ಬರದಂತೆ ತಡೆಗಟ್ಟಬಹುದು. ಜಾಗತಿಕ ಮಟ್ಟದಲ್ಲಿ ಶೇ 90-95ರಷ್ಟು ಮಂದಿ ಟೈಪ್ ಎರಡು ಮಧುಮೇಹದಿಂದ ಬಳಲುತ್ತಿದ್ದಾರೆ. ಜೀವನಶೈಲಿ ಮತ್ತು ಆಹಾರ ಪದ್ಧತಿ ಮೇಲೆ ಎಚ್ಚರವಹಿಸುವ ಮೂಲಕ ಈ ಕಾಯಿಲೆ ನಿಯಂತ್ರಿಸಬಹುದು. ಆದರೆ ಇದಕ್ಕಾಗಿ ವ್ಯಾಪಕ ಜಾಗೃತಿ ಅವಶ್ಯ ಎಂದು ಡಾ. ಎಸ್ ಶಂಕರ್ ವಿವರಿಸಿದರು.
ಪುತ್ತೂರಿನ ಡಾ. ರಾಘವೇಂದ್ರ ಪ್ರಸಾದ್ ಮಾತನಾಡುತ್ತ, ಭಾರತದಲ್ಲಿ ಶೇ 50ರಷ್ಟು ಮಂದಿಗೆ ಡಯಾಬಿಟೀಸ್ ಇದೆ ಎಂಬುದೇ ಗೊತ್ತಿಲ್ಲ. ಒಂದು ಚಿಕ್ಕ ಗಾಯ, ನಂಜಿಗೊಳಗಾಗಿ ಸಂಕೀರ್ಣ ಸ್ಥಿತಿಗೆ ಬಂದಾಗಲೇ ಮಧುಮೇಹದ ಅಪಾಯ ಅರಿವಾಗುತ್ತದೆ. ಆದ್ದರಿಂದ ಮಧುಮೇಹ ತಡೆಗೆ ಪ್ರಾಥಮಿಕ ಹಂತದಿಂದಲೇ ಜಾಗೃತಿ ಮಾನದಂಡ ಅನುಸರಿಸಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಡಾ. ಎಸ್ ಶಂಕರ್ ಸ್ವಾಗತಿಸಿ, ಮಾಹಿತಿ ನೀಡಿದರು. ವೇದಿಕೆಯಲ್ಲಿ ಡಾ. ರಾಘವೇಂದ್ರ ಪ್ರಸಾದ್ ಹಾಗೂ ಸೌಜನ್ಯ ಸತೀಶ್ ಇದ್ದರು.

