ಬಂಟ್ವಾಳ:ಇಲ್ಲಿನ ಕಲ್ಲಡ್ಕ ರಾಷ್ಟ್ರೀಯ ಹೆದ್ದಾರಿ ಬಳಿ ಕಳೆದ 1893ರಲ್ಲಿ ಆರಂಭಗೊಂಡು ಗತವೈಭವದಲ್ಲಿ ಮೆರೆದಿದ್ದ ಕಲ್ಲಡ್ಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ 125ನೇ ವರ್ಷಾಚರಣೆ ಜೊತೆಗೆ ಮತ್ತೆ ಹೊಸತನದ ಉತ್ಸಾಹದಲ್ಲಿ ಮೆರೆಯಲು ಭಾರೀ ಸಿದ್ಧತೆಯಲ್ಲಿದೆ.
ಈ ಬಾರಿ ಸ್ವತಃ ಸರ್ಕಾರವೇ ಆರಂಭಿಸಿರುವ ಆಂಗ್ಲ ಮಾಧ್ಯಮ ಶಾಲೆಗೆ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ ಸುಸಜ್ಜಿತ ಮತ್ತು ಆಕರ್ಷಕ ಕೊಠಡಿಗಳನ್ನು ಶಾಸಕ ಉಳಿಪಾಡಿಗುತ್ತು ರಾಜೇಶ ನಾಯ್ಕ್ ಶನಿವಾರ ಲೋಕಾರ್ಪಣೆಗೊಳಿಸಿದ್ದಾರೆ. ಇಲ್ಲಿನ ಗುಣಮಟ್ಟದ ಶಿಕ್ಷಣದ ಜೊತೆಗೆ ಸಾಂಸ್ಕøತಿಕ ಮತ್ತು ಕ್ರೀಡಾ ಸಾಧನೆಯೂ ಇದೆ. ಇದೀಗ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಸರ್ಕಾರದಿಂದ ಅಧಿಕೃ ಒಪ್ಪಿಗೆ ಸಿಕ್ಕಿರುವುದು ಇಲ್ಲಿನ ಶಿಕ್ಷಕರು ಮತ್ತು ಸ್ಥಳೀಯರಲ್ಲಿ ಹೊಸ ಉತ್ಸಾಹಕ್ಕೆ ಕಾರಣವಾಗಿದೆ.

ಕಳೆದ 25ವರ್ಷಗಳ ಹಿಂದೆ ಅದ್ದೂರಿ ಶತಮಾನೋತ್ಸವ ಕಾರ್ಯಕ್ರಮ ಕಂಡಿದ್ದ ಈ ಶಾಲೆಯಲ್ಲಿ ವರ್ಷ ಕಳೆದಂತೆ ವಿದ್ಯಾರ್ಥಿಗಳ ಕೊರತೆ ಎದುರಾಗಿತ್ತು.
ಇದೀಗ ಎಲ್‍ಕೆಜಿ, ಯುಕೆಜಿ, ಒಂದನೇ ತರಗತಿಗೆ ಹೈಟೆಕ್ ಸ್ಪರ್ಶ ನೀಡಲಾಗಿದ್ದು, ಆಕರ್ಷಕ ಕೊಠಡಿಗಳು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಎಲ್‍ಕೆಜಿ-50 ಮಂದಿ, ಯುಕೆಜಿ-25 ಮಂದಿ, ಕಳೆದ ಎರಡು ವರ್ಷಗಳ ಹಿಂದೆ ಕೇವಲ 9 ಮಂದಿ ಇದ್ದ ಒಂದನೇ ತರಗತಿಗೆ 37 ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ.

ಸರ್ಕಾರದ ಆಯ್ಕೆಯಂತೆ ಇಲ್ಲಿನ ಶಿಕ್ಷಕರೊಬ್ಬರಿಗೆ ಬೆಂಗಳೂರಿನಲ್ಲಿ ವಿಶೇಷ ತರಬೇತಿ ನೀಡಿ ‘ಯೂನಿಸೆಫ್ ಮಾರ್ಗದರ್ಶಿ ಕಲಿಕೆ’ ಯೋಜನೆಯಡಿ ವಿಶೇಷ ಕಲಿಕಾ ಸಾಮಾಗ್ರಿ ಸಹಿತ ಶಿಕ್ಷಣ ನೀಡಲಾಗುತ್ತಿದೆ.
ಪ್ರತೀ ವರ್ಷ ‘ಉತ್ಸವ’ ಎಂಬ ವಿನೂತನ ಕಾರ್ಯಕ್ರಮ ನಡೆಸುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸುವ ಪ್ರಯತ್ನವೂ ಸಾಗಿದೆ. ಪ್ರಸಕ್ತ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಶತಮಾನೋತ್ತರ ಬೆಳ್ಳಿ ಹಬ್ಬ ಸಮಿತಿ ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಡಾ ಸುರೇಶ್ ನೇತೃತ್ವದಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಾಣಕ್ಕೆ ಹಲವಾರು ಮಂದಿ ದಾನಿಗಳು ಕೈ ಜೋಡಿಸುತ್ತಿದ್ದಾರೆ. ಈಗಾಗಲೇ ರೂ 2 ಕೋಟಿ ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಶಿಕ್ಷಣ ಪ್ರೇಮಿ ಮಂಗಳೂರು ಮಾತಾ ಬಿಲ್ಡರ್ಸ್ ಸಂಸ್ಥೆ ಗುತ್ತಿಗೆದಾರ ಸಂತೋಷ್ ಕುಮಾರ್ ಅರೆಬೆಟ್ಟು ಇವರು ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.

ಕಳೆದ 125 ವರ್ಷಗಳ ಹಿಂದೆ ಮುಳಿ ಹುಲ್ಲಿನ ಮಾಡು ಹೊಂದಿದ್ದ ಶಾಲೆಯಲ್ಲಿ 1ರಿಂದ 7ನೇ ತರಗತಿ ತನಕ ಸುಮಾರು 1,400 ಮಂದಿ ವಿದ್ಯಾರ್ಥಿಗಳಿದ್ದರು. ಇದೀಗ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖಗೊಳ್ಳುತ್ತಿರುವುದನ್ನು ಮನಗಂಡ ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಮತ್ತು ಸ್ಥಳೀಯ ನಾಗರಿಕರು ಖಾಸಗಿ ಸಹಭಾಗಿತ್ವದ ಮೂಲಕ ಶಾಲೆಗೆ ಹೊಸ ರೂಪ ನೀಡಿ ವಿದ್ಯಾರ್ಥಿಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸಕ್ತ 1ರಿಂದ 8ನೇ ತರಗತಿ ಹೊಂದಿರುವ ಇಲ್ಲಿ ಒಟ್ಟು 235 ಮಂದಿ ವಿದ್ಯಾರ್ಥಿಗಳಿದ್ದಾರೆ ಎಂದು ಮುಖ್ಯಶಿಕ್ಷಕ ಅಬೂಬಕ್ಕರ್ ಅಶ್ರಫ್ ಸಂತಸ ವ್ಯಕ್ತಪಡಿಸಿದ್ದಾರೆ.

ಆರ್‍ಎಸ್‍ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ ಮತ್ತಿತರರು ಇದೇ ಶಾಲೆಯಲ್ಲಿ ಓದಿದವರು.
ಈಗಾಗಲೇ ಸರ್ವಶಿಕ್ಷಾ ಅಭಿಯಾನ ಯೋಜನೆ ಸೇರಿದಂತೆ ವಿವಿಧ ಅನುದಾನದಲ್ಲಿ ಸುಸಜ್ಜಿತ ಕಂಪ್ಯೂಟರ್ ಕೊಠಡಿ, ಅಕ್ಷರ ದಾಸೋಹ, ಶೌಚಾಲಯ ಮತ್ತಿತರ ಕಟ್ಟಡ ನಿರ್ಮಾಣಗೊಂಡಿದೆ. ಕಳೆದ 2012-13ರಲ್ಲಿ ಮಂಜೂರಾದ ಎರಡು ಹೆಚ್ಚುವರಿ ಕೊಠಡಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಬಳಿ ಸುಮಾರು ಎರಡು ಎಕರೆ ಜಮೀನು ಹೊಂದಿರುವ ವಿಭಿನ್ನ ಶಾಲೆಯಲ್ಲಿ ಶಿಕ್ಷಣದ ಜೊತೆಗೆ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, 200 ಮೀಟರ್ ವಿಸ್ತೀರ್ಣದ ಟ್ರ್ಯಾಕ್ ನಿರ್ಮಿಸುವ ಚಿಂತನೆ ನಡೆದಿದೆ. ಇಲ್ಲಿನ ವಿದ್ಯಾರ್ಥಿಗಳು ಹರ್ಡಲ್ಸ್ ಮತ್ತು ರಿಲೇ ಸ್ಪರ್ಧೆಯಲ್ಲಿ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಈಗಾಗಲೇ ಸಾವಿರಾರು ಮಂದಿ ಉನ್ನತ ಶಿಕ್ಷಣ ಪಡೆದು ವಿವಿಧ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಈ ನಡುವೆ ಕಲ್ಲಡ್ಕ ವ್ಯವಸಾಯ ಸೇವಾ ಸಹಕಾರಿ ಸಂಘ, ಕಲ್ಲಡ್ಕ ಲಕ್ಷ್ಮೀ ಗಣೇಶ್ ಹೋಟೆಲ್ ಮಾಲೀಕ ರಾಜೇಂದ್ರ ಹೊಳ್ಳ, ಶಿವರಾಮ ಹೊಳ್ಳ, ಬೀಡಿ ಉದ್ಯಮಿ ಎನ್.ಸುಲೇಮಾನ್ ಸಹಿತ ಎಂಆರ್‍ಪಿಎಲ್ ಮತ್ತಿತರ ಕಂಪೆನಿ ನೂತನ ಕಟ್ಟಡ ಮತ್ತು ಮೂಲಸೌಕರ್ಯ ಒದಗಿಸುವಲ್ಲಿ ಕೈಜೋಡಿಸಿದೆ ಎನ್ನುತ್ತಾರೆ ಮಕ್ಕಳ ಪೋಷಕರು.
ಜಿಲ್ಲೆಯ ಹಲವಾರು ಸರ್ಕಾರಿ ಶಾಲೆಗಳಿಗೆ ಸುಸಜ್ಜಿತ ಕೊಠಡಿ, ಶೌಚಾಲಯ ಮತ್ತಿತರ ಮೂಲಭೂತ ಸೌಕರ್ಯವನ್ನು ವಿವಿಧ ಕಂಪೆನಿ ಮತ್ತಿತರ ಖಾಸಗಿ ಸಹಭಾಗಿತ್ವದಲ್ಲಿ ದೊರಕಿಸಿ ಕೊಡುತ್ತಿದ್ದು, ಇಲ್ಲಿಯೂ ಅದೇ ಪ್ರಯತ್ನ ನಡೆಯುತ್ತಿದೆ. -ಸಂತೋಷ್ ಕುಮಾರ್ ಅರೆಬೆಟ್ಟು ಗುತ್ತಿಗೆದಾರರು, ಮಾತಾ ಬಿಲ್ಡರ್ಸ್ ಮಂಗಳೂರು
